ADVERTISEMENT

ಜನರ ಸಮಸ್ಯೆಗೆ ಸ್ಪಂದಿಸಬೇಕು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 6:10 IST
Last Updated 6 ಅಕ್ಟೋಬರ್ 2012, 6:10 IST

ಚಳ್ಳಕೆರೆ: ತಾಲ್ಲೂಕುಮಟ್ಟದ ಅಧಿಕಾರಿಗಳು  ಜನರು ಕಚೇರಿಗಳಿಗೆ ಬಂದಾಗ, ಅವರ ಸಮಸ್ಯೆ ಆಲಿಸಿ ಬಗೆಹರಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮೀ ತಾಕೀತು ಮಾಡಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಾದೇಶಿಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಆಯ್ದ ರೈತರಿಗೆ ತೆಂಗಿನ ಸಸಿ ನೀಡಲಾಗುವುದು. ಗುಚ್ಛ ಗ್ರಾಮದಿಂದ ಆಯ್ಕೆಯಾದ ರೈತರಿಗೆ ಸ್ಪಿಂಕ್ಲರ್ ಸೆಟ್ ಪೈಪ್ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಉಪಾಧ್ಯಕ್ಷ ತಿಪ್ಪೇಶ್‌ಕುಮಾರ್ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಎರಡು ವರ್ಷಗಳಿಂದ ಕುಂಠಿತಗೊಂಡಿದೆ. ಯಾವುದೇ ಅಭಿವೃದ್ಧಿ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು.
ನಮ್ಮ ಇಲಾಖೆಗೆ ಬಂದಿರುವ ರೈತರಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ವಿವರಿಸಲು ಮುಂದಾದ ಅಧಿಕಾರಿಯನ್ನು ಉಪಾಧ್ಯಕ್ಷ ತಿಪ್ಪೇಶ್‌ಕುಮಾರ್, ಕಳೆದ ವರ್ಷ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೆಲವು ಸಣ್ಣ ರೈತರ ಜಮೀನುಗಳಲ್ಲಿ ತೋಟಗಾರಿಕೆ ಅಭಿವೃದ್ಧಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಇದುವರೆಗೂ ಸಲ್ಲಿಸಿದ ಅರ್ಜಿಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರೈತರು ಗೋಳು ತೋಡಿಕೊಳ್ಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಜಲಾನಯನ ಅಭಿವೃದ್ಧಿ ಅಧಿಕಾರಿ ಶಂಕರಪ್ಪ, ಇಲಾಖೆ ವತಿಯಿಂದ ಚೆಕ್‌ಡ್ಯಾಂ, ಬದು ನಿರ್ಮಾಣ, ಜಮೀನು ಅಚ್ಚುಕಟ್ಟುಗಳನ್ನು ಮಾಡಲಾಗುವುದು. ಉದ್ಯೋಗ ಖಾತ್ರಿಯ 212 ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಾತಿ ನೀಡಲಾಗಿದೆ ಎಂದು ವಿವರಿಸಿದರು.

ಗೋ ಕಟ್ಟೆ ಹೂಳೆತ್ತುವುದು, ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ನಿಮ್ಮ ಇಲಾಖೆಯೇ ನಿರ್ವಹಿಸಬೇಕು ಎಂದು ತಾ.ಪಂ ಸಹಾಯಕ ಇಒ ಉಮಾಪತಿ ಸೂಚಿಸಿದರು.

ಆರೋಗ್ಯಾಧಿಕಾರಿ ಡಾ.ಸಿ.ಎಲ್. ಫಾಲಾಕ್ಷ ಮಾತನಾಡಿ,  ನ.1 ರಿಂದ ಮಕ್ಕಳಿಗೆ ಐದು ಮಾರಕ ರೋಗಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗ ನಿರೋಧಕ ಚುಚ್ಚು ಮದ್ದು ಉಚಿತವಾಗಿ ಹಾಕಲಾಗುವುದು, ಅಪೌಷ್ಟಿಕತೆಯಿಂದ ಬಳಲುವ 114 ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಹಾಗೂ ಔಷಧಿ ಕೊಡಿಸಲಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ತಿಪ್ಪೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಶ್, ವ್ಯವಸ್ಥಾಪಕ ನಾಗಪ್ಪ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.