ADVERTISEMENT

ಜನ ಸಂಸ್ಕೃತಿ ಪ್ರತಿಷ್ಠಾಪಿಸುವುದೇ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 10:00 IST
Last Updated 17 ಜನವರಿ 2011, 10:00 IST

ಚಿತ್ರದುರ್ಗ: ಕೇವಲ ಸರ್ಕಾರವನ್ನು ರಚಿಸುವುದು ಪ್ರಜಾತಂತ್ರ ವ್ಯವಸ್ಥೆ ಅಲ್ಲ. ಜನ ಸಂಸ್ಕೃತಿಯನ್ನೂ ಪ್ರತಿಷ್ಠಾಪಿಸುವ ಮತ್ತು ಬದುಕನ್ನು ಹಸನಾಗಿಸುವುದೇ ಪ್ರಜಾತಂತ್ರದ ಆಶಯ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಕೆ. ಮಹೇಶ್ ಅಭಿಪ್ರಾಯಪಟ್ಟರು.

ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಕ್ಕಳ ಸಾಹಿತ್ಯ ವೇದಿಕೆ, ದರ್ಶನ್ ಎಜುಕೇಷನ್ ಟ್ರಸ್ಟ್ ಹಾಗೂ ಆಯ್ದ ಯುವಸಂಘಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಇಲ್ಲಿನ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಪ್ರಜಾತಂತ್ರ ವ್ಯವಸ್ಥೆ ಹದಗೆಡುತ್ತಿದೆ. ರಾಜಕಾರಣಿಗಳು ಈ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನತಂತ್ರ ಎನ್ನುವುದು ಇಂದು ಶ್ರೀಮಂತರ ತಂತ್ರವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

70ರ ದಶಕದಲ್ಲಿ ಬಡತನ, ಸಮಾನತೆ, ಅವಮಾನಗಳ ವಿರುದ್ದ ಧ್ವನಿ ಎತ್ತುವವರಿದ್ದರು. ಆದರೆ, ಇಂದು ಅಂತಹ ದನಿಗಳು ಕ್ಷೀಣಿಸಿವೆ. ಜವಾಬ್ದಾರಿಯಿಂದ ವರ್ತನೆ ಮಾಡಬೇಕಾದವರೇ ಮೌನವಹಿಸಿದ್ದಾರೆ. ಜಾಗತೀಕರಣದ ಇಂದಿನ ಸಂಕಟಗಳ ಸ್ಥಿತಿಯಲ್ಲಿ ಬರಹಗಾರರು ಪ್ರತಿಕ್ರಿಯಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ದೇವರು ಮತ್ತು ಭಕ್ತರ ನಡುವಿನ ಪೂಜಾರಿ ವ್ಯವಸ್ಥೆ ಸಮಾಜದ ವ್ಯವಸ್ಥೆಯನ್ನು ಕುಲಗೆಡಿಸಲು ಕಾರಣವಾಗುತ್ತಿದೆ. ಪೂಜಾರಿ ಸಂಸ್ಕೃತಿ ಸಮಾಜವನ್ನು ದಿಕ್ಕು ತಪ್ಪಿಸುತ್ತಿದೆ. ವಿಮರ್ಶಕ ಎನ್ನುವ ಪೂಜಾರಿಯೂ   ಸಾಹಿತ್ಯ ಕ್ಷೇತ್ರವನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಸಾಹಿತ್ಯ ತಲುಪಬೇಕಾದುದು ವಿಮರ್ಶಕನಿಗಲ್ಲ.  ಅದನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಶ್ಮಿ ಅಕ್ಕ, ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ಬಿ.ಟಿ. ಕುಮುದಾ ನಾಯಕ್, ಪತ್ರಕರ್ತ ಮೇಘ ಗಂಗಾಧರ ನಾಯಕ್, ದರ್ಶನ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ಎನ್‌ಎಸ್‌ಎಸ್ ಅಧಿಕಾರಿ ರಮೇಶ್ ಹಾಜರಿದ್ದರು. ರಾಜ್ಯ ಪ್ರಶಸ್ತಿ ವಿಜೇತರಾದ ಎ.ಎನ್. ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

8 ರಿಂದ  ತೇರುಮಲ್ಲೇಶ್ವರ ಜಾತ್ರೆ
ಹಿರಿಯೂರು: ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದಿರುವ ಇಲ್ಲಿನ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಫೆ. 8 ರಿಂದ 22ರವರೆಗೆ ನಡೆಯಲಿದೆ ಎಂದು ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಜಾತ್ರೆಯನ್ನು ಯಶಸ್ವಿಯಾಗಿ ನಡೆಸುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಜ. 18 ರಂದು ಮಧ್ಯಾಹ್ನ 3.30ಕ್ಕೆ  ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಸಭೆಗೆ ನಗರದ ಪ್ರಮುಖರು, ದೇವಸ್ಥಾನದ ಎಲ್ಲಾ ಕೈವಾಡಸ್ಥರು, ಭಕ್ತಾದಿಗಳು ಸಲಹೆಸಹಕಾರ ನೀಡಬೇಕು ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.