ADVERTISEMENT

ಜಾತಿ ಗೋಡೆ ಮೀರಿ ಕೈಜೋಡಿಸಿದ ದೃಷ್ಟಿಹೀನರು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 5:55 IST
Last Updated 26 ಏಪ್ರಿಲ್ 2012, 5:55 IST

ಹಿರಿಯೂರು: ಬಿಕಾಂ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದ ಯುವಕನೊಬ್ಬ, ಅದೇ ಸಂಸ್ಥೆಯಲ್ಲಿ ಪಿಯು ಮುಗಿಸಿ ಕಂಪ್ಯೂಟರ್ ತರಬೇತಿಗೆ ಬರುತ್ತಿದ್ದ ಯುವತಿಗೆ ಬದುಕು ಕೊಡುತ್ತೇನೆ ಎಂದು ಸಲ್ಲಿಸಿದ ಕೋರಿಕೆ ಬುಧವಾರ ಹಿರಿಯೂರಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆಯೊಂದು ನಡೆಯಲು ಕಾರಣವಾಯಿತು.

ಬೆಸುಗೆ: ಮಂಡ್ಯಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಮಾಯಸಿಂಗನಹಳ್ಳಿಯ  ಮರಿಲಿಂಗೇಗೌಡರ ಪುತ್ರಿ ನಾಗಮ್ಮ ಹಾಗೂ ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮದ  ನಾಗರಾಜ್ ಮತ್ತು ದೇವೀರಮ್ಮ ದಂಪತಿ ಪುತ್ರ ಹನುಮಂತರಾಯ ಬುಧವಾರ ಹಸೆಮಣೆ ಏರಿದವರು.

ಬೆಂಗಳೂರಿನ ಕಾರ್ಪೋರೇಷನ್ ಶಾಲೆಯಲ್ಲಿ ಪಿಯು ವ್ಯಾಸಂಗದ ನಂತರ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಉಚಿತ ಕಂಪ್ಯೂಟರ್ ತರಬೇತಿಗೆ ಸೇರಿದ್ದ ನಾಗಮ್ಮ ಮತ್ತು  1ರಿಂದ 10 ನೇ ತರಗತಿವರೆಗೆ ರಮಣಮಹರ್ಷಿ ಅಂಧರ ಶಾಲೆಯಲ್ಲಿ, ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಪಿಯು ಮತ್ತು ಸೇಂಟ್‌ಜೋಸೆಫ್ ಕಾಲೇಜಿನಲ್ಲಿ ದ್ವಿತೀಯ ಬಿಕಾಂವರೆಗೆ ಓದಿ ಉದ್ಯೋಗ ಪಡೆಯುವ ಬಯಕೆಯಿಂದ ಸ್ವಯಂ ಸೇವಾ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್ ತರಬೇತಿಗೆ ಸೇರಿದ್ದ ಹನುಮಂತರಾಯ ನಡುವೆ ಪ್ರೇಮಾಂಕುರವಾಗಿದೆ.

ತಾನೇ ಮೊದಲು ಮದುವೆಗೆ ಕೋರಿಕೆ ಸಲ್ಲಿಸಿದ್ದು. ಮೂರು ವರ್ಷದಿಂದ ಪ್ರೀತಿಸುತ್ತಿದ್ದ ತಮಗೆ  ಆರಂಭದಲ್ಲಿ ಸ್ವಲ್ಪ ವಿರೋಧ ಬಂದರೂ ನಂತರ ಎರಡೂ ಕಡೆಯ ಹಿರಿಯರ ಆಶೀರ್ವಾದ ಸಿಕ್ಕಿರುವುದು ಸಂತಸ ತಂದಿದೆ ಎಂದು ಹನುಮಂತರಾಯ `ಪ್ರಜಾವಾಣಿ~ಗೆ ತಿಳಿಸಿದ.

ಹನುಮಂತರಾಯನನ್ನು ಕೈ ಹಿಡಿದಿರುವುದಕ್ಕೆ ಸಂತಸವಾಗಿದೆ ಎನ್ನುವ ನಾಗಮ್ಮ , ಮುಂದೆ ಓದುವ ಮನಸ್ಸಿಲ್ಲ. ಕಂಪ್ಯೂಟರ್ ಕಲಿತಿದ್ದೇನೆ. ಯಾವುದಾದರೂ ಕೆಲಸ ಹುಡುಕಿ ಸಂಸಾರಕ್ಕೆ ಆಸರೆಯಾಗುವ ಬಯಕೆ ಇದೆ. ಪತಿಗೆ ಬೆಂಬಲವಾಗಿ ಇರುತ್ತೇನೆ ಎನ್ನುತ್ತಾಳೆ.

ಖಾಸಗಿ ಸರ್ವೇಯರ್ ಆಗಿರುವ ನಾಗಮ್ಮಳ ಅಣ್ಣ ಪುಟ್ಟರಾಜು, ಹನುಮಂತರಾಯನ ತಾಯಿ-ತಂದೆ ವಿವಾಹದ ವೇಳೆ ಹಾಜರಿದ್ದರು. ಉಪ ನೋಂದಣಾಧಿಕಾರಿ ಕರಿಯಮ್ಮ, ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಎ. ಮಂಜುನಾಥ್ ಮತ್ತಿತರರು ದಂಪತಿಗಳಿಗೆ ಶುಭ ಕೋರಿದರು.
ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ನೆರವು ನೀಡಿದರೆ ದೃಷ್ಟಿಹೀನರ ಬದುಕು ಹಸನಾಗುತ್ತದೆ. ಹನುಮಂತರಾಯನ ಮೊಬೈಲ್: 97397 26805
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.