ADVERTISEMENT

ಜಿಲ್ಲೆಯಾದ್ಯಂತ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 6:25 IST
Last Updated 14 ಅಕ್ಟೋಬರ್ 2017, 6:25 IST

ಚಿತ್ರದುರ್ಗ: ಮೊಬೈಲ್ ಅಪ್ಲಿಕೇಷನ್‌ ಮೂಲಕ ಜಿಲ್ಲೆಯಾದ್ಯಂತ ಬೆಳೆ ಮತ್ತು ಕೃಷಿಕರ ಮಾಹಿತಿ ದಾಖಲಿಸುವ ಪ್ರಕ್ರಿಯೆಯನ್ನು ಇದೇ 13ರಿಂದ ಒಂದು ತಿಂಗಳ ಕಾಲ ನಡೆಸಲಾಗುವುದು ಎಂದು  ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ರಾಘವೇಂದ್ರ ತಿಳಿಸಿದ್ದಾರೆ. ಗುರುವಾರ ಎಲ್ಲಾ ತಾಲ್ಲೂಕುಗಳ 490 ಕ್ಷೇತ್ರ ಕಾರ್ಯಕರ್ತರಿಗೆ ಮತ್ತು ಸಹಾಯಕರಿಗೆ ನೂತನ ಮೊಬೈಲ್  ತಂತ್ರಾಂಶ ಬಳಕೆ ಕುರಿತ ತರಬೇತಿ ಯಲ್ಲಿ ಅವರು ಮಾತನಾಡಿದರು.

ಸಮೀಕ್ಷೆಗಾಗಿ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕೃಷಿಕರನ್ನೊಳಗೊಂಡು ಗುಂಪುಗಳನ್ನು ರಚಿಸಲಾಗಿದೆ. ಸಮೀಕ್ಷೆದಾರರು ರೈತರ ಹೊಲಗಳಿಗೆ ಭೇಟಿ ನೀಡಿ ಜಮೀನಿನ ರೈತರು ಮತ್ತು ಬೆಳೆಗಳ ಸಮೀಕ್ಷೆ ಮಾಡಿ ಅಂತರ್ಜಾಲದ ಮೂಲಕ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡುತ್ತಾರೆ. ಈ ಸಂದರ್ಭದಲ್ಲಿ ಜಮೀನಿನ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ನೀಡಿ ಸಹಕರಿಸಬೇಕು ಎಂದು ತಿಳಿಸಿದರು.

‘ಮಾಸ್ಟರ್ ಟ್ರೈನರ್‌ಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಆಯಾ ಹೋಬಳಿಯ ಕಂದಾಯ ನಿರೀಕ್ಷಕರು ಮತ್ತು ತಾಂತ್ರಿಕ ಸಹಾಯಕರು ಸಮೀಕ್ಷೆಯ ಉಸ್ತುವಾರಿ ವಹಿಸುವರು. ಯಾವುದೇ ತೊಂದರೆಯಾದರೆ ಆಯಾ ತಾಲ್ಲೂಕಿನ ಗುಂಪುಗಳಲ್ಲಿ ಚರ್ಚೆ ನಡೆಸಿ ಪರಿಹರಿಸಿಕೊಳ್ಳಬೇಕು’ ಎಂದು ಸಮೀಕ್ಷೆದಾರರಿಗೆ ಸೂಚಿಸಿದರು.

ADVERTISEMENT

‘ಸಮೀಕ್ಷೆದಾರರು ಕ್ಷೇತ್ರಗಳಿಗೆ ಹೋಗುವ ಮುನ್ನ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ತಮ್ಮ ಮೊಬೈಲ್‌ಗಳನ್ನು ಚಾಲನೆಯಲ್ಲಿ ಇಟ್ಟುಕೊಂಡು ತಾಕುಗಳಲ್ಲಿರುವ ಮುಂಗಾರು, ಹಿಂಗಾರು ಬೆಳೆಗಳ ಚಿತ್ರ ತೆಗೆಯಬೇಕು. ಆಧಾರ್ ವಿವರ ದಾಖಲಾತಿ ಮತ್ತು ಬೆಳೆಯ ವಿವರ ದಾಖಲಾತಿಯನ್ನು ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಬೇಕು. ಪ್ರತಿ ದಿನದ ಮಾಹಿತಿಯನ್ನು ತಾಲ್ಲೂಕುವಾರು ನಮ್ಮ ಕಚೇರಿಗೆ ರವಾನಿಸಬೇಕು’ ಎಂದು ಸೂಚನೆ ನೀಡಿದರು.

ಈ ತಂತ್ರಾಂಶದಿಂದ ಜಮೀನಿನ ಕ್ಷೇತ್ರ, ವಿವಿಧ ಬೆಳೆ ಸ್ವರೂಪ, ವಿವಿಧ ಬೆಳೆಗಳಿಗೆ ನಿಖರವಾಗಿ ಸಹಾಯಧನ ಅಂದಾಜು ಮಾಡಬಹುದು. ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಫಸಲು ನಷ್ಟದ ನೈಜ ಅಂದಾಜು ಮಾಡಬಹುದು. ರೈತರಿಗೆ ಸಕಾಲದಲ್ಲಿ ನ್ಯಾಯಯುತ ಪರಿಹಾರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಸಾಧ್ಯವಾಗುತ್ತದೆ’  ಎಂದು ತಿಳಿಸಿದರು. ‘ತರಬೇತಿ ಪಡೆದವರು ಸರಿಯಾದ ಸಮೀಕ್ಷೆ ಮಾಡಿ ಮಾದರಿಯಲ್ಲಿ ವರದಿ ನೀಡುವಂತೆ ಅವರು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.