ADVERTISEMENT

ಜೆಡಿಎಸ್ ಪ್ರಚಾರ ಸಭೆಗೆ ಬೃಹತ್ ವೇದಿಕೆ

ಇಂದಿನ ಸಭೆಗೆ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಬಿಎಸ್‌ಪಿಯ ಮಾಯಾವತಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 9:57 IST
Last Updated 26 ಏಪ್ರಿಲ್ 2018, 9:57 IST

ಚಿತ್ರದುರ್ಗ: ಜಿಲ್ಲೆಯ ಆರು ಕ್ಷೇತ್ರಗಳ ಜಾತ್ಯತೀತ ಜನತಾ ದಳದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ.ದೇವೇಗೌಡ ಮತ್ತು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅವರು ಗುರುವಾರ ಜಿಲ್ಲೆಗೆ ಬರುತ್ತಿದ್ದಾರೆ.

ಬಿಎಸ್‌ಪಿಯೊಂದಿಗೆ ಜೆಡಿಎಸ್‌ ಚುನಾವಣಾ ಮೈತ್ರಿ ಮಾಡಿಕೊಂಡಿದೆ. ಬಿಎಸ್‌ಪಿ ನಾಯಕರು ರಾಜ್ಯದಾದ್ಯಂತ ಜೆಡಿಎಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ನಗರಕ್ಕೆ ಆಗಮಿಸುತ್ತಿರುವ ದೇವೇಗೌಡ ಮತ್ತು ಮಾಯಾವತಿ ಅವರು ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಬೃಹತ್ ಚುನಾವಣಾ ಪ್ರಚಾರದ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಅವರೊಂದಿಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಾಥ್ ನೀಡಲಿದ್ದಾರೆ.

ADVERTISEMENT

ಮಧ್ಯಾಹ್ನ 1 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಅದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆಗೆ ನಗರದ ಕನಕ ಸರ್ಕಲ್‌ನಿಂದ
ಸಭಾ ಕಾರ್ಯಕ್ರಮ ನಡೆಯುವ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದವರೆಗೆ ರೋಡ್ ಷೋ ಆಯೋಜಿಸಲಾಗಿದೆ.

ಈ ಮೊದಲು ರೋಡ್ ಷೋಗೆ ಕುಮಾರಸ್ವಾಮಿ ಬರುತ್ತಾರೆಂದು ಹೇಳಲಾಗಿತ್ತು. ಆದರೆ, ವೇಳಾಪಟ್ಟಿ ಬದಲಾಗಿದ್ದು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಸಿ.ವೀರೇಂದ್ರ (ಪಪ್ಪಿ), ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ರೋಡ್ ಷೋ ನಡೆಸಲಿದ್ದಾರೆ.

ಕುಮಾರಸ್ವಾಮಿ ಅವರು ಸಭಾ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಪಕ್ಷದ ವಕ್ತಾರ ಗೋಪಾಲ ಸ್ವಾಮಿ ನಾಯಕ್ ತಿಳಿಸಿದ್ದಾರೆ.
ಕನಕವೃತ್ತದಿಂದ ಆರಂಭವಾಗುವ ರೋಡ್ ಷೋ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ ಮತ್ತು ಮದಕರಿನಾಯಕ ವೃತ್ತದ ಮೂಲಕ ವಿಜ್ಞಾನ ಕಾಲೇಜಿನ ಮೈದಾನ ತಲುಪಲಿದೆ. ರೋಡ್ ಷೋನಲ್ಲಿ ಸ್ಥಳೀಯ ಜೆಡಿಎಸ್ ಮುಖಂಡರು, ಬಿಎಸ್ ಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಳ್ಳುತ್ತಿದ್ದಾರೆ. 8ರಿಂದ 10 ಸಾವಿರದವರೆಗೆ ಜನ ಸೇರುವ ನಿರೀಕ್ಷೆ ಇದೆ.

ಬೃಹತ್ ವೇದಿಕೆ ಸಜ್ಜು: ಸಮಾವೇಶಕ್ಕಾಗಿ ವಿಜ್ಞಾನ ಕಾಲೇಜು ಮೈದಾನದಲ್ಲಿ 80 ಅಡಿ X 150 ಅಡಿ ವಿಸ್ತಾರವಾದ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. 30 ಸಾವಿರ ಆಸನಗಳು ಹಿಡಿಸುವಷ್ಟು ಶಾಮಿಯಾನ ಹಾಕಿಸಲಾಗಿದೆ. 60 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಈ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಗೋಪಾಲಸ್ವಾಮಿ ನಾಯಕ್ ತಿಳಿಸಿದ್ದಾರೆ.

ಪ್ರಚಾರ ಸಭೆಯಲ್ಲಿ ಆರು ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಚಿತ್ರದುರ್ಗದಿಂದ ಕೆ.ಸಿ.ರವೀಂದ್ರ, ಹೊಳಲ್ಕೆರೆ ಕ್ಷೇತ್ರದ ಶ್ರೀನಿವಾಸ ಗದ್ದಿಗೆ, ಹೊಸದುರ್ಗದಿಂದ ನಟ ಶಶಿಕುಮಾರ್, ಮೊಳಕಾಲ್ಮುರಿನಿಂದ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ, ಚಳ್ಳಕೆರೆಯಿಂದ ರವೀಶ್ ಕುಮಾರ್ ಹಾಗೂ ಹಿರಿಯೂರಿನಿಂದ ಡಿ. ಯಶೋಧರ್ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ವಿಧಾನ ಪರಿಷತ್ತಿನ ಜೆಡಿಎಸ್ ಸದಸ್ಯರಾದ ರಮೇಶ್ ಬಾಬು, ಚೌಡರೆಡ್ಡಿ ತೂಪಲ್ಲಿ, ಬಹುಜನ ಸಮಾಜವಾದಿ ಪಕ್ಷದಿಂದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಉಸ್ತುವಾರಿ ಡಾ .ಅಶೋಕ್ ಸಿದ್ದಾರ್ಥ, ಕರ್ನಾಟಕ ಚುನಾವಣಾ ಉಸ್ತುವಾರಿ ಎಂ.ಗೋಪಿನಾಥ್, ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್, ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಕಮಲನಾಭನ್, ಸಿ.ಕೆ.ಮಹೇಶ್ವರಪ್ಪ, ಜಿ.ಆರ್. ಪಾಂಡುರಂಗಪ್ಪ, ಜಿಲ್ಲಾ ಸಂಯೋಜಕ ಕೆ. ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಚಿತ್ರದುರ್ಗ ಬಿಎಸ್‌ಪಿ ಜಿಲ್ಲಾಧ್ಯಕ್ಷ ದೊಡ್ಡೊಟ್ಟೆಪ್ಪ, ತಾಲ್ಲೂಕು ಅಧ್ಯಕ್ಷ ಕೆ. ವಿಶ್ವನಾಥ ಅವರೂ ಪಾಲ್ಗೊಳ್ಳುತ್ತಿದ್ದಾರೆ. ಆರು ತಾಲ್ಲೂಕುಗಳ ಜೆಡಿಎಸ್ ಘಟಕದ ಅಧ್ಯಕ್ಷರು, ಕಾರ್ಯದರ್ಶಿಗಳು, ಮುಖಂಡರು,  ಜಿಲ್ಲೆಯ ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು ಎಲ್ಲ ತಾಲ್ಲೂಕುಗಳಿಂದ ಬೃಹತ್ ಪ್ರಮಾಣದಲ್ಲಿ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ.  ಪಕ್ಕದ ದಾವಣಗೆರೆ, ತುಮಕೂರು, ಬಳ್ಳಾರಿ ಜಿಲ್ಲೆಗಳಿಂದಲೂ ಜೆಡಿಎಸ್ ಅಭಿಮಾನಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಗೋಪಾಲ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.