ADVERTISEMENT

ಜೋಳಿಗೆ ಹಿಡಿದು ಮತಯಾಚಿಸುವ ಪಕ್ಷೇತರ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 9:34 IST
Last Updated 29 ಏಪ್ರಿಲ್ 2018, 9:34 IST
ಜಂಗಮ ವೇಷಧಾರಿಯಾಗಿ ಪಕ್ಷೇತರ ಅಭ್ಯರ್ಥಿ ಎಂ.ಎಸ್‌.ಸತೀಶ್‌ ಅವರು ಜೋಳಿಗೆ ಹಿಡಿದು ಭಿಕ್ಷೆ ಬೇಡುವುದರ ಜೊತೆಗೆ ಮತಯಾಚಿಸಿದರು
ಜಂಗಮ ವೇಷಧಾರಿಯಾಗಿ ಪಕ್ಷೇತರ ಅಭ್ಯರ್ಥಿ ಎಂ.ಎಸ್‌.ಸತೀಶ್‌ ಅವರು ಜೋಳಿಗೆ ಹಿಡಿದು ಭಿಕ್ಷೆ ಬೇಡುವುದರ ಜೊತೆಗೆ ಮತಯಾಚಿಸಿದರು   

ಹೊಸದುರ್ಗ: ಚುನಾವಣೆಗೆ ಸ್ಪರ್ಧಿಸಿದವರು ತಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ರೋಡ್‌ ಷೋ, ಮೆರವಣಿಗೆ ಹಾಗೂ ಮನೆ, ಮನೆಗೆ ತೆರಳಿ ಮತಯಾಚಿಸುವುದು ಸಾಮಾನ್ಯ. ಆದರೆ, ಇದಕ್ಕೆ ಭಿನ್ನವಾಗಿ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಬನ್ಸಿಹಳ್ಳಿ ಎಂ.ಎಸ್‌. ಸತೀಶ್‌ ಜಂಗಮ ವೇಷಧಾರಿಯಾಗಿ ಜೋಳಿಗೆ ಹಿಡಿದು ಮನೆ, ಮನೆಗೆ ತೆರಳಿ ಭಿಕ್ಷೆ ಬೇಡುವುದರ ಜೊತೆಗೆ ಮತಯಾಚನೆ ಮಾಡುತ್ತಿದ್ದಾರೆ.

ಜಂಗಮ ವೇಷಧಾರಿಯಾಗಿ ಭೇಟಿ ನೀಡಿದಾಗ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಯುಳ್ಳ ಕೆಲವು ಮನೆಯವರು ಕಾಲಿಗೆ ನೀರು ಹಾಕಿ, ಕಾಲಿಗೆ ಬಿದ್ದು ಮನೆಯೊಳಗೆ ಕರೆಯುತ್ತಾರೆ. ಜೋಳಿಗೆ ಅಕ್ಕಿ, ವೀಳ್ಯದೆಲೆ, ಅಡಿಕೆ ಹಾಗೂ ಕಾಣಿಕೆ ಹಾಕುತ್ತಾರೆ.

‘ನಾನು ಬಡವನಾಗಿದ್ದು, ಚುನಾವಣೆ ಖರ್ಚಿಗೂ ಹಣವಿಲ್ಲ. ಆದರೆ, ರಾಜಕೀಯದಲ್ಲಿ ಸೇವೆ ಮಾಡಬೇಕೆಂಬ ಹಂಬಲವಿದೆ. ಹೀಗಾಗಿ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನಿಮ್ಮ ಮತ ನೀಡಿ ಗೆಲ್ಲಿಸಿ’ ಎಂದು ಆ ಮನೆಯ ಸದಸ್ಯರಲ್ಲಿ ಮನವಿ ಮಾಡುವ ಸತೀಶ್‌, ಮತ್ತೊಂದು ಮನೆಯತ್ತ ಹೆಜ್ಜೆ ಹಾಕುತ್ತಾರೆ.

ADVERTISEMENT

‘ಹಣ, ಉಡುಗೊರೆ, ಹೆಂಡ– ಖಂಡಗಳನ್ನು ಮತದಾರರಿಗೆ ಒಡ್ಡದೇ, ಚುನಾವಣೆ ಆಯೋಗದ ನಿಯಮಕ್ಕೆ ಬದ್ಧನಾಗಿ ಸ್ಪರ್ಧಿಸಿದ್ದೇನೆ. ಮತದಾರರು ಗೆಲ್ಲಿಸಿದರೆ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಮೂಲಸೌಕರ್ಯಗಳಿಗೆ ಆದ್ಯತೆ ನೀಡುತ್ತೇನೆ. ಸ್ತ್ರೀಶಕ್ತಿ ಗುಂಪುಗಳ ಸ್ವಾವಲಂಬನೆಗೆ ಉತ್ತೇಜನ ನೀಡುತ್ತೇನೆ’ ಎಂದು ಸತೀಶ್‌ ಮತದಾರರಿಗೆ ಭರವಸೆ ನೀಡಿದ್ದಾರೆ.

ಅಕ್ಕಿ ಅನಾಥಾಶ್ರಮಕ್ಕೆ

‘ಮತಯಾಚನೆಗೆ ಹೋದಾಗ ಭಕ್ತರು ಹಾಕುವ ಅಕ್ಕಿಯನ್ನು ಯಾವುದಾದರೊಂದು ಅನಾಥಾಶ್ರಮಕ್ಕೆ ದಾನ ಮಾಡುತ್ತೇನೆ. ಭಕ್ತರು ಹಾಕಿದ ಕಾಣಿಕೆ ಹಣದಲ್ಲಿ ನನ್ನ ಜೊತೆಗೆ ಪ್ರಚಾರಕ್ಕೆ ಬಂದಿದ್ದ ಮೂರ್ನಾಲ್ಕು ಮಂದಿಗೆ ತಿಂಡಿ, ಊಟ ಮಾಡಿಸುತ್ತೇನೆ. ನಾಮಪತ್ರ ಸಲ್ಲಿಸುವ ಮೊದಲೇ ಬನ್ಸೀಹಳ್ಳಿ, ಕಂಠಾಪುರ, ದೊಡ್ಡಘಟ್ಟ, ದೇವಪುರ, ಜಾನಕಲ್ಲು, ತಣಿಗೇಕಲ್ಲುಗ್ರಾಮದ ಕೆಲವು ಮನೆಗಳಲ್ಲಿ ಮತಯಾಚನೆ ಮಾಡಿದ್ದೇನೆ’ ಎಂದು ಸತೀಶ್‌ ತಿಳಿಸಿದರು.

‌– ಎಸ್‌. ಸುರೇಶ್‌ ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.