ADVERTISEMENT

ಟಗರು ಗುದ್ದಿದ ರಭಸಕ್ಕೆ ರೆಡ್ಡಿ ಬೆನ್ನಾಗ್ ನೋವು ಹೋಗಿಲ್ಲ

ಕಾಂಗ್ರೆಸ್ ಪ್ರಚಾರ ಸಭೆ ಸಿ.ಎಂ.ಇಬ್ರಾಹಿಂ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 4 ಮೇ 2018, 8:50 IST
Last Updated 4 ಮೇ 2018, 8:50 IST

ನಾಯಕನಹಟ್ಟಿ: ‘ನರೇಂದ್ರ ಮೋದಿಜೀ ಈ ಟಗರು ಎಂತಹದ್ದು ಅಂತ ಹೋಗಿ ಜನಾರ್ದನ ರೆಡ್ಡಿಗೆ ಕೇಳಿ, ಐದು ವರ್ಷದ ಹಿಂದೆ ಟಗರು ಗುದ್ದಿದ ರಭಸಕ್ಕೆ ರೆಡ್ಡಿ ಬೆನ್ನಾಗ್ ನೋವು ಹೋಗಿಲ್ಲ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು.

ಪಟ್ಟಣದ ಎಸ್.ಟಿ.ಎಸ್.ಆರ್. ಪ್ರೌಢಶಾಲೆ ಆವರಣದಲ್ಲಿ ಗುರುವಾರ ನಡೆದ ಮೊಳಕಾಲ್ಮುರು ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ (ಟಗರು) ಐದು ವರ್ಷಗಳ ಹಿಂದೆ 320 ಕಿಮೀ ಪಾದಯಾತ್ರೆ ಮಾಡಿ ಬಳ್ಳಾರಿಗೆ ಹೋಗಿ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೇ ಎಂದು ಕನ್ನಡ ನಾಡನ್ನು ರಕ್ಷಿಸಿದ್ದಾರೆ. ‘ಮಾ ನಾಯನ ಜನಾರ್ದನ ರೆಡ್ಡಿ ಎಕ್ಕಡುನ್ನಾಡಪ್ಪಾ, ಹೈದರಾಬಾದ್ ಜೈಲ್‌ಲೋ ಸಿಲ್ವರ್ ತಟ್ಟೆಲೋ ಗಂಜಿ ತಾಗಿನದಿ ಮರ್ಚಿಪೋಯಾವಾ ರೆಡ್ಡಿ’ ಎಂದು ಜನಾರ್ದನ ರೆಡ್ಡಿಯವರನ್ನು ತೆಲುಗಿನಲ್ಲಿ ಟೀಕಿಸಿದರು.

ADVERTISEMENT

ಬಳ್ಳಾರಿಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜನಾರ್ದನ ರೆಡ್ಡಿ
ಶರ್ಟ್‌ ಸರ್ ಅಂದ್ರೆ ಯುಡಿಯೂರಪ್ಪನ ಪ್ಯಾಂಟ್ ಪರ್ ಅಂತದೆ. ಇಂದು ಬಾದಾಮಿಯ ಬೆಟ್ಟವನ್ನು ಅಗೆಯಲು ಬಂದಿದ್ದಾರೆ. ಆದರೆ ಸತೀಶಣ್ಣ ಸೇರಿದಂತೆ ನಾಯಕ ಸಮುದಾಯ, ಕುರುಬ ಸಮುದಾಯ, ಅಲ್ಪಸಂಖ್ಯಾತರು ಎಲ್ಲರೂ ಸಿದ್ದರಾಮಯ್ಯ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ. ಶ್ರೀರಾಮುಲು, ಸೋಮಶೇಖರರೆಡ್ಡಿ, ಶೋಭಕ್ಕ ಎಲ್ಲರೂ ಶೆಟ್ರ ಅಂಗಡಿಯಲ್ಲಿ ಇಲಿ ಸಿಕ್ಕಹಾಕಿಕೊಂಡಂಗೆ ಬೋನಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಜನಸೇವೆಯ ಚಿಂತೆಯಾದರೆ, ಯಡಿಯೂರಪ್ಪಗೆ ಶೋಭಕ್ಕನ ಚಿಂತೆ. ಕುರುಬರ ಕೈಯಲ್ಲಿ ಬೋನಿ ಮಾಡಿಸಿಕೊಂಡರೆ ಒಳ್ಳೆದಾಗುತ್ತದೆ ಎಂಬ ನಂಬಿಕೆ ಇದೆ. ರಾಜ್ಯದ ಬೊಕ್ಕಸದಲ್ಲಿ ಅಭಿವೃದ್ಧಿಗೆ ಸಾಕಷ್ಟು ಹಣವಿದೆ. ಆದರೆ ಮೋದಿಜೀಯವರ ಎಟಿಎಂನಲ್ಲಿ ದುಡ್ಡಿಲ್ಲ ಎಂದು ವ್ಯಂಗ್ಯವಾಡಿದರು.

ಸತೀಶ್‌ ಜಾರಕಿಹೊಳಿ, ಎಸ್. ಆಂಜನೇಯ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.