ADVERTISEMENT

ಟೆಂಡರ್‌ ಬರೆಯದ ದಲ್ಲಾಳಿಗಳು; ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 6:51 IST
Last Updated 19 ಸೆಪ್ಟೆಂಬರ್ 2013, 6:51 IST

ಚಿತ್ರದುರ್ಗ: ಎಪಿಎಂಸಿ ಮಾರುಕಟ್ಟೆಗೆ ಮಾರಾಟಕ್ಕಾಗಿ ತಂದ ಸೂರ್ಯಕಾಂತಿ ಬೆಳೆಯನ್ನು ಖರೀದಿ ಮಾಡದೇ ದಲ್ಲಾಳಿಗಳು  ಅನ್ಯಾಯವೆಸಗಿದ್ದಾರೆ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯಿತು.

ಬೆಳಿಗ್ಗೆ ಜಿಲ್ಲೆಯ ವಿವಿಧೆಡೆಯಿಂದ ರೈತರು ಸೂರ್ಯಕಾಂತಿ, ಶೇಂಗಾ ಉತ್ಪನ್ನಗಳು ಬೆಳಿಗ್ಗೆ ಮಾರುಕಟ್ಟೆಗೆ ತಂದಿದ್ದಾರೆ. ನಿಯಮದಂತೆ ದಲ್ಲಾಳಿಗಳು ಬುಧವಾರ ಬೆಳಿಗ್ಗೆ ಟೆಂಡರ್ ಕರೆದಿದ್ದಾರೆ. ಆದರೆ, ಮಳೆ ಬರುತ್ತದೆ ಎಂಬ ಕಾರಣದಂದ ಶೆಡ್‌ನ ಒಳಗೆ ಸುರಿದಿದ್ದ ಸೂರ್ಯಕಾಂತಿ ಹಾಗೂ ಶೇಂಗಾ ಬೆಳೆಗಳನ್ನು ಖರೀದಿ ಮಾಡಿಲ್ಲ ಎಂಬುದು ರೈತರ ಆರೋಪ.

ಜಿಲ್ಲೆಯಲ್ಲದೇ, ಕಡೂರು, ಬೀರೂರು, ತರೀಕೆರೆ, ಚನ್ನಗಿರಿ ಮತ್ತಿತರೆಡೆಗಳಿಂದ ಮಂಗಳವಾರ ರಾತ್ರಿಯೇ ಸೂರ್ಯಕಾಂತಿಯನ್ನು ಚಿತ್ರದುರ್ಗದ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದೇವೆ. ಆದರೆ, ಬುಧವಾರ ಟೆಂಡರ್ ಕರೆಯದ ಕಾರಣ ಮತ್ತೆ ಶುಕ್ರವಾರದವರೆಗೆ ಮಾರುಕಟ್ಟೆಯಲ್ಲಿಯೇ ಬೆಳೆಯನ್ನು ಹಾಕಿಕೊಂಡು ಕಾಯಬೇಕಾಗಿದೆ ಎಂದು ಅವರು ದೂರಿದರು.

ನಮ್ಮಂತೆಯೇ ಬೇರೆ ರೈತರು ಮಾರುಕಟ್ಟೆಗೆ ಬೆಳೆಗಳನ್ನು ತಂದಿದ್ದಾರೆ. ಅವರ ಬೆಳೆಗಳಿಗೆ ಟೆಂಡರ್ ಮಾಡಿ ಖರೀದಿಸಿದ್ದಾರೆ. ಆದರೆ, ಗೋದಾಮಿನೊಳಗೆ ಹಾಕಿದ್ದ ಬೆಳೆ  ಹಸಿಯಾಗಿದೆ ಎಂಬ ಕಾರಣವೊಡ್ಡಿ,   ಖರೀದಿಸಿಲ್ಲ. ಮಳೆಯಿಂದ ರಕ್ಷಿಸುವ ಸಲುವಾಗಿ ಸುಮಾರು ೫೦ಕ್ಕೂ ಹೆಚ್ಚು  ರೈತರ ತಮ್ಮ ಉತ್ಪನ್ನಗಳು ಗೋದಾಮಿನೊಳಗೆ ಹಾಕಿದ್ದರು. ಆದರೆ, ದಲ್ಲಾಳಿಗಳು ಸುಖಾಸುಮ್ಮನೆ ಬೆಳೆ ಹಸಿಯಾಗಿದೆ ಎಂದು ನೆಪ ಹೇಳುತ್ತಿದ್ದಾರೆ. ಆದರೆ, ಹಸಿ ಸೂರ್ಯಕಾಂತಿಯನ್ನು ಮಾರುಕಟ್ಟೆಗೆ ಹೇಗೆ ಬಿಡಿಸಿ ತರಲು ಸಾಧ್ಯ ಎಂಬುದನ್ನು ಯೋಚಿಸಬೇಕಿತ್ತು ಎಂದು ರೈತರು ಪ್ರಶ್ನಿಸಿದ್ದಾರೆ.

‘ಈ ವರ್ಷ ಸೂರ್ಯಕಾಂತಿ ಬೆಳೆ ಬೆಲೆ ಕುಸಿದಿದೆ. ಕಳೆದ ವರ್ಷ ಕ್ವಿಂಟಲ್‌ಗೆ ` ೪,೫೦೦ ದಿಂದ ೫ ಸಾವಿರೆವರೆಗೆ ಬೆಲೆಯಿತ್ತು. ಈ ವರ್ಷ
` ೨,೨೦೦ ರಿಂದ ೨,೩೦೦ಗೆ ಇಳಿದಿದೆ. ಅಸಮರ್ಪಕ ಮಳೆ, ಬೀಜ, ಗೊಬ್ಬರಗಳ ದುಬಾರಿ ಬೆಲೆ. ಹೀಗಾಗಿ ಇಷ್ಟು ಕಡಿಮೆ ಬೆಲೆಗೆ ರೈತರ ಬೆಳೆಗಳನ್ನು ಖರೀದಿಸುವುದು ಸರಿಯಲ್ಲ. ತಕ್ಷಣವೇ ಸರ್ಕಾರ ಶೇಂಗಾ ಹಾಗೂ ಸೂರ್ಯಕಾಂತಿ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದರು.

ಬೀರೂರಿನ ದೋಗೆಹಳ್ಳಿಯ ಕೆಂಚಪ್ಪ, ಡಿ.ಟಿ. ತಿಮ್ಮೇಗೌಡ, ಲೋಕೇಶ್, ಕೃಷ್ಣಪ್ಪ, ಲಕ್ಷ್ಮಣ, ನಾಗರಾಜ್, ರಾಜಪ್ಪ, ವೆಂಕಟೇಶಪ್ಪ ಇನ್ನಿತರೆ ರೈತರು, ದಲ್ಲಾಳಿಗಳ ಕ್ರಮವನ್ನು ವಿರೋಧಿಸಿ, ಎಪಿಎಂಸಿ ಎದುರೇ ಪ್ರತಿಭಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.