ADVERTISEMENT

ತರಕಾರಿ ಮಾರಾಟಕ್ಕಿಳಿದ ಶಾಲಾ ಮಕ್ಕಳು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 9:34 IST
Last Updated 12 ಡಿಸೆಂಬರ್ 2017, 9:34 IST
ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಎಸ್‌ಆರ್‌ಎಸ್‌ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ತರಕಾರಿ ಮತ್ತು ಸೊಪ್ಪು ಮಾರುತ್ತಿರುವುದು.
ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಎಸ್‌ಆರ್‌ಎಸ್‌ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ತರಕಾರಿ ಮತ್ತು ಸೊಪ್ಪು ಮಾರುತ್ತಿರುವುದು.   

ಚಿತ್ರದುರ್ಗ: ‘ಬದನೆಕಾಯಿ, ಆಲುಗಡ್ಡೆ, ಹಸಿ ಮೆಣಸಿನಕಾಯಿ ತಲಾ ಕೆ.ಜಿ. ₹ 20, ಟೊಮೆಟೊ ಕೆ.ಜಿ. ₹ 10, ಕ್ಯಾರೆಟ್ ಕೆ.ಜಿ. ₹ 70, ಕೊತ್ತಂಬರಿ, ಮೆಂತೆ, ಪಾಲ್ಕ ಹೀಗೆ ವಿವಿಧ ಸೊಪ್ಪುಗಳು ₹ 10 ಕ್ಕೆ ನಾಲ್ಕೈದು. ಬನ್ನಿ ಬನ್ನಿ ಯಾವುದು ಬೇಕು ತೆಗೆದುಕೊಳ್ಳಿ’...

ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸೋಮವಾರ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಎಸ್‌ಆರ್‌ಎಸ್ ತರಕಾರಿ ಮೇಳ’ದಲ್ಲಿ ಶಾಲೆಯ ಮಕ್ಕಳು ತರಕಾರಿ ಮಾರಾಟಕ್ಕೆ ತೊಡಗಿಸಿಕೊಂಡ ಬಗೆ ಇದು.

ಇದು ಲೇಡಿಸ್ ಫಿಂಗರ್, ಕೋರಿಯಂಡರ್, ಬ್ರಿಂಜಾಲ್, ಗ್ರೀನ್ಸ್, ರಾಡಿಷ್, ಕರಿ ಲೀವ್ಸ್ ಎಂದು ಕೂಗುತ್ತಿರುವುದು ಬದಲಾದ ಕಾಲಘಟ್ಟದಲ್ಲಿ ಮಾರುಕಟ್ಟೆಯಲ್ಲಿ ಬದಲಾಗುತ್ತಿರುವ ಭಾಷೆಗೆ ಸಾಕ್ಷಿಯಂತೆ ಕಾಣುತ್ತಿತ್ತು.

ADVERTISEMENT

ದೀಕ್ಷಾ, ಯಶಸ್ವಿನಿ, ತನುಶ್ರೀ, ಆದ್ಯಾ, ಪ್ರಣೀತ್, ರವಿತೇಜ್ ಹೀಗೆ ಮೂರು ತಂಡಗಳು ₹ 500 ರ ತರಕಾರಿ ಕೊಂಡು ವ್ಯಾಪಾರ ಮಾಡಲು ಮುಂದಾದರು. ಇನ್ನೂ ಇನ್ನೂರು ರೂಪಾಯಿಯದ್ದು ವ್ಯಾಪಾರ ಆದರೆ, ನಾವು ಹಾಕಿರುವ ಬಂಡವಾಳ ವಾಪಸ್‌ ಬರುತ್ತದೆ ಎಂದು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.

ಪಲ್ಲವಿ, ಅಪೇಕ್ಷಾ, ತನುಷ್ಕಾ, ಪ್ರತಿಕ್ಷಾ ತಂಡ ಖರೀದಿಸಿದ್ದು ಒಟ್ಟು ₹ 800 ರ ತರಕಾರಿ ಮತ್ತು ಸೊಪ್ಪು. ‘ಒಂದು ತಗೊಂಡರೆ ಒಂದು ಫ್ರಿ’ ಡಿಸ್ಕೌಂಟ್ ರೇಟ್‌ನಲ್ಲಿ ಮಾರಾಟ ಎಂದು ವಿದ್ಯಾರ್ಥಿನಿಯರು ನಾಮಫಲಕ ಹಾಕಿಕೊಂಡಿದ್ದರು.

ಉಳಿದ ತರಕಾರಿಯನ್ನು ಅಂಗಡಿಯವರಿಗೆ ಮಾರಾಟ ಮಾಡಿ ಸರಕು ಖಾಲಿ ಮಾಡಬೇಕೆನ್ನುವ ಉತ್ಸಾಹ ಕೆಲ ಮಕ್ಕಳಲ್ಲಿ ಕಂಡು ಬಂತು. ತೂಕದ ವಿಷಯದಲ್ಲಿ ಮಕ್ಕಳು ಸ್ವಲ್ಪ ವೀಕು ಎನ್ನಿಸಿತು. ತೂಕಕ್ಕಿಂತ ಗುಡ್ಡೆ ತರಕಾರಿ ವ್ಯಾಪಾರಕ್ಕೆ ಮಕ್ಕಳು ಜೋತು ಬಿದ್ದಿದ್ದರು.

ತಂದೆ, ತಾಯಿ, ಶಿಕ್ಷಕರು ಮಕ್ಕಳ ಜತೆಗೆ ಸಂತೆಯಲ್ಲಿ ವ್ಯಾಪಾರಕ್ಕಾಗಿ ನಿಂತಿದ್ದರು. ಮಕ್ಕಳಿಗೆ ಚಿಲ್ಲರೆ ಕೊಡುವಾಗ, ವ್ಯಾಪಾರ ಮಾಡುವಾಗ, ಮಾರುಕಟ್ಟೆ ತಂತ್ರಗಳನ್ನು ಹೇಳಿಕೊಡುತ್ತಿದ್ದರು. ನೋಟು ಪಡೆದಾಗ, ಚಿಲ್ಲರೆ ಕೊಡುವಾಗ ಮಕ್ಕಳು ಹಾಕುತ್ತಿದ್ದ ಇಂಗ್ಲಿಷ್ ಭಾಷೆಯ ಲೆಕ್ಕಾಚಾರ ಸುತ್ತಲಿದ್ದ ಜವಾರಿ ಭಾಷೆ ಮಂದಿಗೆ ರಂಜನೀಯವೆನಿಸುತ್ತಿತ್ತು.

ಎಸ್‌ಆರ್‌ಎಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ‘ಶಾಲೆಯ ಪಠ್ಯಕ್ಕಷ್ಟೇ ಮಕ್ಕಳು ಸೀಮಿತವಾಗಬಾರದು. ಪ್ರಸ್ತುತ ಹೊರಗಿನ ಪ್ರಪಂಚದಲ್ಲಿ ವ್ಯವಹಾರ ಜ್ಞಾನವೂ ಅವಶ್ಯಕವಾಗಿದೆ. ಅದರ ಜತೆಗೆ ಕೊಳ್ಳುವ ಮತ್ತು ಮಾರುವ ನೈಪುಣ್ಯ ಮಕ್ಕಳಲ್ಲಿ ಕರಗತ ಮಾಡಬೇಕಿದೆ. ಸ್ವಂತ ವ್ಯಾಪಾರ ಮಾಡಿ ಬದುಕು ರೂಪಿಸಿಕೊಳ್ಳಬಲ್ಲ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮ ಮಾಡಲಾಗಿದೆ’ ಎಂದು ಹೇಳಿದರು.

ಪ್ರಾಚಾರ್ಯ ಎಂ.ಎಸ್.ಪ್ರಭಾಕರ್ ಮಾತನಾಡಿ, ‘ಎಸ್‌ಆರ್‌ಎಸ್‌ ಶಾಲೆಯ ಐದು ಮತ್ತು ಆರನೇ ತರಗತಿಯ ಒಟ್ಟು 100 ಮಕ್ಕಳು ಈ ಮೇಳದಲ್ಲಿ ಭಾಗವಹಿಸಿದ್ದು, 20 ತಂಡಗಳನ್ನಾಗಿ ವಿಂಗಡಿಸಿದ್ದೇವೆ. ಪ್ರತಿ ತಂಡದಲ್ಲಿ 5 ವಿದ್ಯಾರ್ಥಿಗಳು ಇದ್ದಾರೆ’ ಎಂದರು.

ಸುಮಾರು ಎರಡು ಗಂಟೆಗಳ ಕಾಲ ಮಕ್ಕಳು ಉತ್ಸಾಹದಿಂದ ತರಕಾರಿ, ಸೊಪ್ಪು ಮಾರಾಟ ಮಾಡುವ ಮೂಲಕ ಸಂತೋಷಪಟ್ಟರು ಎಂದು ಶಾಲೆಯ ಶಿಕ್ಷಕಿಯರಾದ ನಿಶಾತ್, ಶಹಜೀಯಾ ತಿಳಿಸಿದರು. ಕೊನೆಯಲ್ಲಿ ಕೆಲ ಮಕ್ಕಳು ‘ಎಷ್ಟು ವ್ಯಾಪಾರವಾಗಿದೆ ಎಣಿಸೋಣ’ ಎಂದರೆ, ಮತ್ತೆ ಕೆಲವರು ‘ಶಾಲೆಗೆ ಹೋಗಿ ಅಲ್ಲಿ ನೋಡೋಣ. ಇಲ್ಲಿ ಬೇಡ’ ಎನ್ನುತ್ತಿರುವುದು ಕಂಡು ಬಂತು

ಪೆಚ್ಚಾಗುತ್ತಿದ್ದ ಮಕ್ಕಳು
ಗ್ರಾಹಕರ ಎದುರು ನಿಂತು ತರಕಾರಿ ತೆಗೆದುಕೊಳ್ಳಲು ಮಕ್ಕಳು ಗೋಗರೆಯುತ್ತಿದ್ದರು. ತರಕಾರಿ ಬೇಡ ಎಂದಾಗ ಅವರ ಮುಖ ಪೆಚ್ಚಾಗುತ್ತಿತ್ತು.

ಮಕ್ಕಳಿಗೆ ಉಚಿತ ₹ 1
ಮಂಗಳಮುಖಿಯೊಬ್ಬರಿಗೆ ತರಕಾರಿ ಮಾರೋಕೆ ಹೋದಾಗ ಅವರು ಓಡಿ ಹೋದರು. ಫೋಟೊ ತೆಗೆದ ನಂತರ ಬಂದು ಎಲ್ಲ ಮಕ್ಕಳಿಗೂ ಒಂದೊಂದು ರೂಪಾಯಿ ನೀಡಿ ಅಚ್ಚರಿ ಮೂಡಿಸಿದರು.

* * 

ತೂಕ ಮಾಡಲು ವೇಯಿಂಗ್ ಮಶಿನ್, ತಕ್ಕಡಿ, ಕಲ್ಲು, ಪುಟ್ಟಿ, ಪ್ಲಾಸ್ಟಿಕ್ ಬಾಂಡಲಿ ಹೀಗೆ ವ್ಯಾಪಾರಕ್ಕೆ ಬೇಕಾದ ವಸ್ತುಗಳನ್ನು ವಿದ್ಯಾರ್ಥಿಗಳೇ ತಂದಿದ್ದಾರೆ. ಎಂ.ಎಸ್.ಪ್ರಭಾಕರ್, ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.