ADVERTISEMENT

ತಾಯಿ, ಶಿಶು ಮರಣ ತಪ್ಪಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 9:20 IST
Last Updated 21 ಸೆಪ್ಟೆಂಬರ್ 2011, 9:20 IST

ನಾಯಕನಹಟ್ಟಿ: ತಾಯಿ ಮತ್ತು ಶಿಶು ಮರಣ ತಪ್ಪಿಸಲು ಸಮುದಾಯದ ಸಹಕಾರ ಅಗತ್ಯ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪಾಲಾಕ್ಷ ಸಲಹೆ ನೀಡಿದರು. ಸಮೀಪದ ತಳುಕಿನಲ್ಲಿ ಮಂಗಳವಾರ ನಡೆದ ಸಮುದಾಯ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ರಾಜ್ಯದಾದ್ಯಂತ ಸಮುದಾಯ ಆರೋಗ್ಯ ದಿನವನ್ನು ಇಲಾಖೆ ಆಚರಿಸುತ್ತಿದೆ. ಆರೋಗ್ಯವನ್ನು ಕಾಪಾಡುವುದು ಇಲಾಖೆಯಷ್ಟೇ ಜವಾಬ್ದಾರಿ ಸಮುದಾಯದ್ದಾಗಿದೆ. 2011-12 ಅನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ವರ್ಷವನ್ನಾಗಿ ಆಚರಿಸುತ್ತಿದ್ದು, ಏಳು ಮಾರಕ ರೋಗಗಳ ವಿರುದ್ಧ ಲಸಿಕೆಯನ್ನು ಹಾಕಲಾಗುವುದು ಎಂದು ತಿಳಿಸಿದರು.

ಇಂದು ಆರೋಗ್ಯ ಕೇಂದ್ರಗಳಲ್ಲಿ ಅನೇಕ ಸೌಲಭ್ಯಗಳನ್ನು ಇಲಾಖೆ ಒದಗಿಸಿದೆ. ಜನನಿ ಸುರಕ್ಷಾದಂತಹ ಯೋಜನೆಯಿದ್ದು, ಮನೆಯಲ್ಲಿ ಹೆರಿಗೆ ಮಾಡಿಸದೇ ಆರೋಗ್ಯ ಕೇಂದ್ರದಲ್ಲಿ ಮಾಡಿಸಿ ಶಿಶು, ತಾಯಿ ಮರಣವನ್ನು ತಪ್ಪಿಸಿ ಎಂದು ಕರೆ ನೀಡಿದರು.

ವೈದ್ಯಾಧಿಕಾರಿ ಡಾ.ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿ, ತಳುಕಿನ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 15ರಿಂದ 20 ಹೆರಿಗೆಗಳು ಆಗುತ್ತಿವೆ. ಸ್ಥಳೀಯ ಜನಪ್ರತಿನಿಧಿಗಳು, ಸಮುದಾಯದವರು, ಆರೋಗ್ಯ ಕೇಂದ್ರದ ಬಗ್ಗೆ ಕಾಳಜಿ ವಹಿಸಿ ಅಭಿವೃದ್ಧಿ ಮಾಡುವುದರ ಜತೆಯಲ್ಲಿ ಇಲ್ಲಿ ಸಿಗುವಂತಹ ಸೌಲಭ್ಯ  ಸದುಪಯೋಗ ಮಾಡಿಕೊಂಡು ಉತ್ತಮ ಆರೋಗ್ಯ ಪಡೆಯಿರಿ ಎಂದು ತಿಳಿಸಿದರು. ತಾ.ಪಂ. ಸದಸ್ಯೆ ಜಯಲಕ್ಷ್ಮೀ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ಗ್ರಾ.ಪಂ. ಸದಸ್ಯ ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಗ್ರಾ.ಪಂ. ಸದಸ್ಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು. ಮಹಾಂತೇಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.