ADVERTISEMENT

ದಡ್ಡಿ ಸೂರನಾಯಕ ಜಾತ್ರೆಗೆ ವೈಭವದ ತೆರೆ

ಹಿರೇಹಳ್ಳಿ; ಮ್ಯಾಸನಾಯಕರ ಸಂಸ್ಕೃತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2014, 9:09 IST
Last Updated 5 ಫೆಬ್ರುವರಿ 2014, 9:09 IST
(ಎಡಚಿತ್ರ). ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ.
(ಎಡಚಿತ್ರ). ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ.   

ಮೊಳಕಾಲ್ಮುರು: ಹಲವು ಬುಡಕಟ್ಟು ಸಂಸ್ಕೃತಿಗಳ ಆಚರಣೆ ಜತೆಯಲ್ಲಿ ಕ್ಷೇತ್ರ ವ್ಯಾಪ್ತಿ ಹಿರೇಹಳ್ಳಿಯಲ್ಲಿ ಮಂಗಳವಾರ ಸಂಜೆ ದಡ್ಡಿ ಸೂರನಾಯಕ ಜಾತ್ರೆಗೆ ವೈಭವದ ತೆರೆಬಿತ್ತು.

ಜಿಲ್ಲೆಯ ಅದರಲ್ಲೂ ಮ್ಯಾಸನಾಯಕ ಸಂಸ್ಕೃತಿ ಬಿಂಬಿಸುವ ಪ್ರಮುಖವಾಗಿರುವ ಈ ಜಾತ್ರೆಯಲ್ಲಿ ಸೋಮವಾರ ಗಂಗಾಪೂಜೆ ನಂತರ ದೇವಸ್ಥಾನದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆಗಳು ನಡೆದವು. ರಾತ್ರಿ ಇಡೀ ಭಕ್ತರು ಮೀಸಲು ತಂದಿದ್ದ ಹುರುಳಿಯನ್ನು ಬೇಯಿಸಿ ಬೆಳಿಗ್ಗೆ ದೇವರಿಗೆ ನೈವೇದ್ಯ ಅರ್ಪಿಸಿದರು.

ನಂತರ ದೇವಸ್ಥಾನ ಮುಂಭಾಗಕ್ಕೆ ಆಗಮಿಸಿದ್ದ ದೇವರ ಎತ್ತುಗಳಿಗೆ ಪೂಜೆ ಮಾಡಲಾಯಿತು. ಇದೇ ವೇಳೆ ಹರಕೆ ಹೊತ್ತವರು, ದಡ್ಡಿಸೂರನಾಯಕ ವಂಶಸ್ಥರು ಎತ್ತುಗಳಿಗೆ ಧವಸ, ಧಾನ್ಯ, ಹಣ್ಣು ಅರ್ಪಿಸಿ ಆರ್ಶೀವಾದ ಪಡೆದರು. ಕಿಲಾರಿಗಳಿಗೆ ಕಾಣಿಕೆ ಅರ್ಪಣೆ ಮಾಡಲಾಯಿತು. ಹರಕೆ ಹೊತ್ತವರು ದೇವಸ್ಥಾನ ಮುಂಭಾಗದಲ್ಲಿ ಹರಕೆ ಹೊತ್ತವರಷ್ಟು ತೂಕದಷ್ಟು ಬಾಳೆಹಣ್ಣನ್ನು ದೇವರಿಗೆ ಅರ್ಪಣೆ ಮಾಡಿದರು.

ಸಂಜೆ ದೇವಸ್ಥಾನ ಆವರಣದಿಂದ ಮೆರವಣಿಗೆ ಮೂಲಕ ರುದ್ರಮ್ಮನಹಳ್ಳಿ ಕ್ರಾಸ್ ಬಳಿಯ ಸ್ಥಳಕ್ಕೆ ದೇವರನ್ನು ಕರೆದುಕೊಂಡು ಹೋಗಿ ಅಲ್ಲಿ ದೇವರ ಮುಂದೆ ದೇವರ ಎತ್ತುಗಳನ್ನು ಓಡಿಸಲಾಯಿತು. ಇದೇ ವೇಳೆ ಪೂಜಾರರು ಕತ್ತಿವರಸೆ ಮೂಲಕ ದಡ್ಡಿಪಾಲನಾಯಕ ಮತ್ತು ಕಂಪಳರಂಗ ಸ್ವಾಮಿ ಬಾಂಧವ್ಯ ರೂಪಕ ನಡೆಸಿಕೊಟ್ಟರು. ನಂತರ, ಭಕ್ತರು ಸೂರ್ಯನ ನಮಸ್ಕಾರ ಮಾಡಿದರು.

ಶಾಸಕ ನೇರ್‍ಲಗುಂಟೆ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಲಕ್ಷ್ಮೀದೇವಮ್ಮ, ಮುಖಂಡ ಟಿ.ಡಿ.ದೊಡ್ಡಯ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯ ತಿಪ್ಪೇಸ್ವಾಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಣ್ಣ, ಉಪಾಧ್ಯಕ್ಷೆ ಹನುಮಕ್ಕ ಹಾಗೂ ದೇವಸ್ಥಾನ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.