ADVERTISEMENT

ದಶಕದ ನಂತರ ನಿಜಲಿಂಗಪ್ಪ ಸ್ಮಾರಕ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2011, 9:50 IST
Last Updated 29 ಜನವರಿ 2011, 9:50 IST
ದಶಕದ ನಂತರ ನಿಜಲಿಂಗಪ್ಪ ಸ್ಮಾರಕ ಅರ್ಪಣೆ
ದಶಕದ ನಂತರ ನಿಜಲಿಂಗಪ್ಪ ಸ್ಮಾರಕ ಅರ್ಪಣೆ   

ಚಿತ್ರದುರ್ಗ: ದಶಕದ ನಂತರ ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪ ಅವರ ಸ್ಮಾರಕ ಕೊನೆಗೂ ಲೋಕಾರ್ಪಣೆಯಾಗಲಿದೆ. ಜಿಲ್ಲಾಡಳಿತ, ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್, ಚಿತ್ರದುರ್ಗ ಹಾಗೂ ಎಸ್. ನಿಜಲಿಂಗಪ್ಪ ನ್ಯಾಷನಲ್ ಫೌಂಡೇಷನ್ ಬೆಂಗಳೂರು ಇವರ ಆಶ್ರಯದಲ್ಲಿ ಜ. 29ರಂದು ಬೆಳಿಗ್ಗೆ 10.30ಕ್ಕೆ ಆಯೋಜಿಸಿರುವ ಸಮಾರಂಭದಲ್ಲಿ ಬೌದ್ಧ ಧಾರ್ಮಿಕ ಗುರು, ನೊಬೆಲ್ ಪ್ರಶಸ್ತಿ ಪುರಸ್ಕೃತ ದಲೈಲಾಮಾ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

2000ನೇ ಇಸ್ವಿಯಲ್ಲಿ ಆರಂಭವಾದ ಕಾಮಗಾರಿ ಪೂರ್ಣವಾಗಲು 10 ವರ್ಷ ಬೇಕಾಯಿತು. ಒಟ್ಟು ` 3 ಕೋಟಿ  ವೆಚ್ಚದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಸ್ಮಾರಕಕ್ಕೆ ರಾಜ್ಯ ಸರ್ಕಾರ ` 2 ಕೋಟಿ ಅನುದಾನ ನೀಡಿದೆ. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ` 1 ಕೋಟಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ` 1 ಕೋಟಿ ಬಿಡುಗಡೆ ಮಾಡಿದ್ದರು. ಶಾಸಕ ಶಾಮನೂರು ಶಿವಶಂಕರಪ್ಪ ` 50 ಲಕ್ಷ ಹಾಗೂ ಪ್ರಭಾಕರ ಕೋರೆ ` 20 ಲಕ್ಷ ನೀಡಿದ್ದರು. ಉಳಿದ ` 30 ಲಕ್ಷ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿತ್ತು.

ಶನಿವಾರ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸಲಿದ್ದಾರೆ. ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ನೇತೃತ್ವವಹಿಸಲಿದ್ದಾರೆ.ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಸಂಸದ ಜನಾರ್ದನಸ್ವಾಮಿ, ಶಾಸಕ ಎಸ್.ಕೆ. ಬಸವರಾಜನ್, ವಿಧಾನಪರಿಷತ್ ಸದಸ್ಯರಾದ ಎಂ.ವಿ. ರಾಜಶೇಖರನ್, ಜಿ.ಎಚ್. ತಿಪ್ಪಾರೆಡ್ಡಿ, ವೈ.ಎ. ನಾರಾಯಣಸ್ವಾಮಿ, ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಧರ್ಮದರ್ಶಿ ಎಚ್. ಹನುಮಂತಪ್ಪ, ನ್ಯಾಷನಲ್ ಫೌಂಡೇಷನ್ ಅಧ್ಯಕ್ಷ ನ್ಯಾಯಮೂರ್ತಿ ವಿ.ಎಸ್. ಮಳೀಮಠ, ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಮಾರಕದ ಆವರಣದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಗ್ರಾಮೀಣಾಭಿವೃದ್ಧಿಗೆ ಪೂರಕವಾಗುವ ಸಂಸ್ಥೆಗಳನ್ನು ಆರಂಭಿಸುವ ಉದ್ದೇಶವಿದೆ. ಮುಖ್ಯವಾಗಿ ಜನಪ್ರತಿನಿಧಿಗಳಿಗೆ ತರಬೇತಿ ಮೂಲಕ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.