ADVERTISEMENT

ನಗರಕ್ಕೆ‘ಉಗ್ರಂ’ ಚಿತ್ರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 5:13 IST
Last Updated 1 ಮಾರ್ಚ್ 2014, 5:13 IST

ಚಿತ್ರದುರ್ಗ: ಈಗಾಗಲೇ ತೆರೆಕಂಡಿರುವ ‘ಉಗ್ರಂ’ ಚಿತ್ರದ ಪ್ರವಾಸ ಆರಂಭಿಸಿರುವ ಚಿತ್ರ ತಂಡ ಚಿತ್ರದುರ್ಗದ ಪ್ರಸನ್ನ ಚಿತ್ರಮಂದಿರಕ್ಕೆ ಶುಕ್ರವಾರ ಆಗಮಿಸಿತ್ತು. ತೆರೆದ ವಾಹನದಲ್ಲಿ ಚಿತ್ರದ ನಾಯಕ ನಟ ಮುರಳಿ ನೇತೃತ್ವದಲ್ಲಿ ನಟರಾದ ತಿಲಕ್, ಶರತ್, ರಣತುಂಗ, ನಟಿ ಹರಿಪ್ರಿಯಾ ನಗರದ ಕೆಲ ರಸ್ತೆಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದರು.

ತಂಡವು ಚಿತ್ರಮಂದಿರದ ಮುಂದೆ ಆಗಮಿಸುತ್ತಿದ್ದಂತೆ ಹೊರಗಡೆ ನಿಂತಿದ್ದ ಅಭಿಮಾನಿಗಳು ಚಪ್ಪಾಳೆ ಮೂಲಕ ಬರಮಾಡಿಕೊಂಡರು. ನಂತರ ಚಿತ್ರ ತಂಡವು ಕೆಲ ಹೊತ್ತು ಚಲನಚಿತ್ರ ವೀಕ್ಷಿಸಿತು. ಚಿತ್ರದ ಕ್ಲೈಮಾಕ್ಸ್ ವೇಳೆ ನಾಯಕ ನಟ ಮುರುಳಿ ಪರದೆ ಮುಂದೆ ಬಂದು ನಿಲ್ಲುತ್ತಿದಂತೆಯೇ ಪ್ರೇಕ್ಷಕರು ಸಂತೋಷದಿಂದ ಕೈ ಬೀಸಿದರು. ಚಿತ್ರ ತಂಡ ಆಗಮಿಸಿರುವ ಸುದ್ದಿ ತಿಳಿದ ಮುರಳಿ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೆಲವರು ನೆಚ್ಚಿನ ನಟರೊಂದಿಗೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ ನಟ ಮುರಳಿ, ರಾಜ್ಯದ ಮೂಲೆ ಮೂಲೆಗೆ ತೆರಳಿ ಜನರ ಆಶೀರ್ವಾದ ಪಡೆಯುವ ಸಲುವಾಗಿ ಈ ಪ್ರವಾಸ ಕೈಗೊಂಡಿದ್ದೇವೆ ಎಂದರು.

ತುಮಕೂರು, ಹಿರಿಯೂರು ಸೇರಿ ವಿವಿಧೆಡೆ ಭೇಟಿ ನೀಡಿದ್ದು, ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಡಬ್ಬಿಂಗ್‌ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ಚಿತ್ರರಂಗದ ಹಿರಿಯ ನಟರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. ದೊಡ್ಡವರ ಹಾದಿಯಲ್ಲಿ ನಾವು

ಕೂಡ ನಡೆಯುತ್ತೇವೆ. ತೆಲುಗು, ತಮಿಳಿನಂತೆ ಕನ್ನಡ ಚಿತ್ರಗಳು ಅದ್ದೂರಿಯಾಗಿ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಪ್ರಸ್ತುತ ದಿನಗಳಲ್ಲಿ ಸೋಲುತ್ತಿವೆ ಎಂಬ ಮಾತು ಸತ್ಯಕ್ಕೆ ದೂರವಾದುದು. ಉತ್ತಮ ಚಿತ್ರಕಥೆ ಮತ್ತು ನಿರೂಪಣೆ ಹೊಂದಿದ್ದರೆ ಕನ್ನಡಿಗರು ಚಿತ್ರವನ್ನು ನೋಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.