ADVERTISEMENT

ನಾಲ್ಕು ಅಭ್ಯರ್ಥಿಗಳಿರುವ ಕ್ಷೇತ್ರದಲ್ಲಿ ‘ತ್ರಿಕೋನ’ ಸ್ಪರ್ಧೆ

ಕಾಂಗ್ರೆಸ್‌ ಕೋಟೆ ಚಳ್ಳಕೆರೆಯಲ್ಲಿ ಮೂರು ಪಕ್ಷಗಳ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 9 ಮೇ 2018, 9:38 IST
Last Updated 9 ಮೇ 2018, 9:38 IST

ಚಳ್ಳಕೆರೆ: ರಾಜ್ಯದಲ್ಲಿಯೇ ಅತಿ ಕಡಿಮೆ ಅಭ್ಯರ್ಥಿಗಳು ಕಣದಲ್ಲಿರುವ ಕ್ಷೇತ್ರವೆಂದು ಗುರುತಿಸಿಕೊಂಡಿರುವ ಚಳ್ಳಕೆರೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಸ್ವರಾಜ್ ಇಂಡಿಯಾ ಪಕ್ಷ ಕೂಡ ಮತದಾರರ ಮನೆಬಾಗಿಲು ತಟ್ಟುತ್ತಿದೆ.

ಶಾಸಕ ಟಿ.ರಘುಮೂರ್ತಿ ಮರು ಆಯ್ಕೆ ಬಯಸಿ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಪುತ್ರ ಕೆ.ಟಿ.ಕುಮಾರಸ್ವಾಮಿ ಬಿಜೆಪಿಯಿಂದ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಎಂ.ರವೀಶ್ ಕುಮಾರ್ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಕೆ.ಪಿ.ಭೂತಯ್ಯ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಕಾಂಗ್ರೆಸ್ ಭದ್ರಕೋಟೆ: ಕ್ಷೇತ್ರದಲ್ಲಿ ನಡೆದ 13 ಚುನಾವಣೆಗಳಲ್ಲಿ ಏಳು ಬಾರಿ ಗೆಲುವು ಸಾಧಿಸಿರುವ ಕಾಂಗ್ರೆಸ್, ಬಲವಾದ ಹಿಡಿತ ಹೊಂದಿದೆ. ಬಿಜೆಪಿ ಹಾಗೂ ಜನತಾ ಪರಿವಾರಕ್ಕೂ ಇಲ್ಲಿನ ಮತದಾರರು ಮಣೆ ಹಾಕಿದ್ದಾರೆ. 2013ರ ಚುನಾವಣೆಯಲ್ಲಿ 61 ಸಾವಿರ ಮತಗಳಿಸಿ ರಘುಮೂರ್ತಿ ಶಾಸಕರಾಗಿದ್ದರು. ಕೆಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಬಿಜೆಪಿ ಅಭ್ಯರ್ಥಿ ಕುಮಾರಸ್ವಾಮಿ, 23 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈಗ ಮತ್ತೊಮ್ಮೆ ಇಬ್ಬರೂ ಮುಖಾಮುಖಿಯಾಗಿದ್ದಾರೆ.

ADVERTISEMENT

ಶಾಸಕ ರಘುಮೂರ್ತಿ ಐದು ವರ್ಷಗಳಿಂದ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಬಿಜೆಪಿಯ ಕುಮಾರಸ್ವಾಮಿ, ಯಡಿಯೂರಪ್ಪ ಸರ್ಕಾರ ಹಾಗೂ ಕೇಂದ್ರದ ಸಾಧನೆಗಳೊಂದಿಗೆ ಮತ ಯಾಚಿ­ಸುತ್ತಿದ್ದಾರೆ. ಜೆಡಿಎಸ್ ರವೀಶ್, ಕುಮಾರಸ್ವಾಮಿ ಸರ್ಕಾರದ ಸಾಧನೆಗಳೊಂದಿಗೆ ಪ್ರಚಾರಕ್ಕಿಳಿದಿದ್ದಾರೆ.

ಕಳೆದ ಚುನಾವಣೆಯಲ್ಲಿ 27 ಸಾವಿರ ಮತಗಳನ್ನು ಪಡೆದಿದ್ದ ಜೆಡಿಎಸ್ ಈ ಬಾರಿ ತನ್ನ ಸಾಮರ್ಥವ್ಯವನ್ನು ಹೆಚ್ಚಿಸಿಕೊಂಡಿದೆ. ಬಿಜೆಪಿಯ ಮಾಜಿ ಶಾಸಕ ಬಸವರಾಜ ಮಂಡಿಮಠ ಜೆಡಿಎಸ್ ಗೆ ಬೆಂಬಲ ಸೂಚಿಸಿದ್ದು, ಪಕ್ಷಕ್ಕೆ ಬಲ ಬಂದಂತಾಗಿದೆ. ಕೆಲವು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಜೆಡಿಎಸ್ ಸೇರಿದ್ದು ಪಕ್ಷದ ಬಲ ವೃದ್ಧಿಯಾಗಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಗೆ ಅಣಿಯಾಗಿದೆ.

ಒಂದಾದ ಮೂರು ಪಕ್ಷ:
ಐದು ವರ್ಷಗಳ ಹಿಂದೆ ಕೆಜೆಪಿ ಹಾಗೂ ಬಿಎಸ್‌ಆರ್‌ ಕಾಂಗ್ರೆಸ್ ಪಕ್ಷಗಳಾಗಿ ವಿಭಜನೆಯಾಗಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಒಂದಾಗಿವೆ. 2013ರ ಚುನಾವಣೆಯಲ್ಲಿ ಕೆಜೆಪಿ 37 ಸಾವಿರ, ಬಿಜೆಪಿ 12 ಸಾವಿರ ಮತಗಳನ್ನು ಪಡೆದಿದ್ದವು. ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಮತವೂ ಸೇರಿದಂತೆ ಮೂರು ಪಕ್ಷಗಳೊಂದಿಗೆ ಚದುರಿದ್ದ ಮತಗಳು ಈ ಚುನಾವಣೆಯಲ್ಲಿ ಒಗ್ಗೂಡಲಿವೆ ಎಂಬ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿದೆ.

ಪರಿಶಿಷ್ಟರ ಮತಗಳೇ ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ, ಗೆಲುವಿಗೆ ಮೇಲ್ವರ್ಗ ಮತ್ತು ಹಿಂದುಳಿದ ವರ್ಗದ ಮತಗಳು ಅಗತ್ಯವಿದೆ ಎನ್ನುವುದು ಲೆಕ್ಕಾಚಾರ. ಈ ಸಮುದಾಯಗಳು ಯಾರ ಕೈ ಹಿಡಿಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಮತದಾರರ ಅಂಕಿ–ಅಂಶ

ಪುರುಷರು  1,04,045

ಮಹಿಳೆಯರು  1,02,423

ಹೊಸದಾಗಿ ಸೇರ್ಪಡೆಗೊಂಡವರು  6,471

ಒಟ್ಟು ಮತದಾರರು 2,06,471

– ರಾಜಾ ಪರಶುರಾಮನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.