ADVERTISEMENT

ನೀರಾವರಿಗೆ ರೂ 2000 ಕೋಟಿ ಮೀಸಲಿಡಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:15 IST
Last Updated 11 ಫೆಬ್ರುವರಿ 2012, 10:15 IST

ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತಾಗಲು, ಈ ಬಾರಿಯ ಬಜೆಟ್‌ನಲ್ಲಿ ಕನಿಷ್ಠ ್ಙ 2,000 ಕೋಟಿ  ಮೀಸಲಿಡುವಂತೆ ಸರ್ವಪಕ್ಷ ನಿಯೋಗ ಕೊಂಡೊಯ್ದು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಕುರಿತಂತೆ ಏರ್ಪಡಿಸಿದ್ದ ಸರ್ವಪಕ್ಷ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.

ವಾಣಿ ವಿಲಾಸ ಜಲಾಶಯಕ್ಕೆ ಬಚಾವತ್ ಸ್ಕೀಂನಲ್ಲಿ ಲಭ್ಯವಿರುವ 23 ಟಿಎಂಸಿ ನೀರಿನಲ್ಲಿ 5 ಟಿಎಂಸಿ ನೀರು ಕೊಡುವ ಬಗ್ಗೆ ಬೃಹತ್ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಆದೇಶ ಮಾಡಿಸಿದ್ದು, ನೀರಾವರಿ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಇರುವ ವಿರೋಧ ಪಕ್ಷದ ಉಪ ನಾಯಕ ಟಿ.ಬಿ. ಜಯಚಂದ್ರ, ಮಾಜಿ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಸರ್ಕಾರದ ಮೇಲೆ ಒತ್ತಡ ತಂತ್ರ ಹೇರಬೇಕಿದೆ. ಜತೆಗೆ ಇದೇ ವೇಳೆಯಲ್ಲಿ ಧರ್ಮಪುರ, ಉಡುವಳ್ಳಿ ಕೆರೆಗಳಿಗೆ ಪೂರಕ ನಾಲೆ, ಗಾಯತ್ರಿ ಜಲಾಶಯದ ಉಠಾವಣೆ ಬಗೆಗೂ ಸರ್ಕಾರದ ಗಮನ ಸೆಳೆಯಬೇಕು. ಇದಕ್ಕಾಗಿ ಪಕ್ಷಾತೀತವಾಗಿ ತಾಲ್ಲೂಕುಮಟ್ಟದ ಸಮಿತಿ ರಚನೆ ಮಾಡಬೇಕು ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ವಾಣಿ ವಿಲಾಸ ಜಲಾಶಯಕ್ಕೆ 5 ಟಿಎಂಸಿ ಬದಲು 10 ಟಿಎಂಸಿ ನೀರು ಪೂರೈಕೆ ಮಾಡಿದರೆ ಮಾತ್ರ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಮತ್ತಿತರ ಕಡೆಗೆ ನೀರು ಪೂರೈಕೆ ಮಾಡಲು ಸಾಧ್ಯ. 30 ಟಿಎಂಸಿ ಸಂಗ್ರಹಣ ಸಾಮರ್ಥ್ಯದ ಜಲಾಶಯಕ್ಕೆ ನೀರು ಬಾರದೆ ರೈತರು ನಿರಂತರವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅನಾವೃಷ್ಠಿ ಸಮಯದಲ್ಲಿ ಕುಡಿಯಲು ನೀರೂ ಇಲ್ಲದೆ ಪರದಾಡಿದ್ದೇವೆ. ಎ ಅಥವಾ ಬಿ ಸ್ಕೀಂ ಎಂಬ ವ್ಯತ್ಯಾಸ ಮಾಡದೆ ಹೇಗಾದರೂ ಸರಿ ನೀರು ಬರುವಂತೆ ಮಾಡಬೇಕು ಎಂಬ ಗುರಿಯೊಂದಿಗೆ ಹೋರಾಟ ನಡೆಸೋಣ ಎಂದು ಕೆಲವರು ಸಲಹೆ ಮಾಡಿದರು.

ಹೋರಾಟದಲ್ಲಿ ರಾಜಕೀಯ ತರುವುದು ಬೇಡ. ತಾಲ್ಲೂಕಿನ ಜನತೆಗೆ ಅನುಕೂಲವಾಗಬೇಕು ಎಂಬ ಒಂದೇ ಉದ್ದೇಶ ಇರಬೇಕು. ಕುದೂರಿಗೆ ನೀರು ಕೊಂಡೊಯ್ಯುವ  ಬಗ್ಗೆ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ವಾಣಿ ವಿಲಾಸ ಜಲಾಶಯಕ್ಕೆ ನೀರು ಬರುವ ತನಕ ಸದರಿ ಯೋಜನೆಯನ್ನು ಸ್ಥಗಿತಗೊಳಿಸಬೇಕು. ಇದಕ್ಕಾಗಿ ಅಗತ್ಯ ಬಿದ್ದರೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ರಸ್ತೆ ತಡೆಗು ಮುಂದಾಗಬೇಕು ಎಂದು ಮುಖಂಡರು ಕರೆ ನೀಡಿದರು.

ತೀರ್ಮಾನ: ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಎಚ್.ಕೆ. ಪಾಟೀಲ್, ಕ್ಯಾಪ್ಟನ್ ರಾಜಾರಾವ್ ಅವರನ್ನು ಆಹ್ವಾನಿಸಿ, ಬೃಹತ್ ವೇದಿಕೆಯಲ್ಲಿ ಯೋಜನೆ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ಏರ್ಪಡಿಸಬೇಕು. ಬಜೆಟ್‌ನಲ್ಲಿ ್ಙ 2000 ಕೋಟಿ ಮೀಸಲಿಡುವಂತೆ ಸಿಎಂಗೆ ಒತ್ತಾಯಿಸಲು ಮುಂದಿನ ವಾರ ನಿಯೋಗ ತೆರಳಬೇಕು. ಧರ್ಮಪುರ, ಉಡುವಳ್ಳಿ ಕೆರೆಗಳ ಪೂರಕ ನಾಲೆ, ಗಾಯತ್ರಿ ಜಲಾಶಯ ಉಠಾವಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆ ಉದ್ದೇಶಿಸಿ ಮಾಜಿ ಸಂಸತ್ ಸದಸ್ಯ ಪಿ. ಕೋದಂಡರಾಮಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಜಿ.ಪಂ. ಮಾಜಿ ಅಧ್ಯಕ್ಷ ಎಂ. ಜಯಣ್ಣ, ಬಿ.ಎಸ್. ರಘುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಚ್. ಮಂಜುನಾಥ್, ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಎ. ಕೃಷ್ಣಸ್ವಾಮಿ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಕೆ.ಸಿ. ಹೊರಕೇರಪ್ಪ ಮತ್ತಿತರರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.