ADVERTISEMENT

ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 5:31 IST
Last Updated 7 ಡಿಸೆಂಬರ್ 2012, 5:31 IST

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದು ಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನ್ಯಾಯಬೆಲೆ ಅಂಗಡಿ ಮಾಲೀಕ ಪಿ. ರಂಗಸ್ವಾಮಿ ಅವ್ಯಹಾರ ನಡೆಸುತ್ತಿದ್ದು, ಸರ್ಕಾರ ಹಾಗೂ ಪಡಿತರ ಚೀಟಿದಾರರಿಗೆ ಮೋಸ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಧಾನ್ಯ ಹಾಗೂ ಸೀಮೆ ಎಣ್ಣೆಯನ್ನು ಸಮರ್ಪಕವಾಗಿ ವಿತರಿಸದೆ ಜನರಿಗೆ ಮೋಸ ಮಾಡಿದ್ದಾರೆ. ತೂಕದಲ್ಲಿ ಮೋಸ ಮಾಡಿ ಕಡಿಮೆ ಪ್ರಮಾಣದ ಸಾಮಗ್ರಿಗಳನ್ನು ವಿತರಿಸಿದ್ದಲ್ಲದೆ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆದಿದ್ದಾರೆ. ಈ ಎಲ್ಲ ಅವ್ಯವಹಾರಗಳ ಕುರಿತು ಕಳೆದ ಜೂನ್ ತಿಂಗಳಲ್ಲಿ ಜಿಲ್ಲಾ ಆಡಳಿತಕ್ಕೆ ದೂರು ನೀಡಲಾಗಿತ್ತು. ಅದರ ಪರಿಣಾಮವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ್ದರು. ನಂತರ ನ್ಯಾಯಬೆಲೆ ಅಂಗಡಿ ಅಮಾನತು ಆದೇಶ ಮಾಡಲಾಗಿತ್ತೆಂದು ಗ್ರಾಮಸ್ಥರು ದೂರಿದರು.

ಮಾಲೀಕರು ಪಡಿತರ ಧಾನ್ಯ ಜನರಿಗೆ ವಿತರಿಸದೆ ದುರುಪಯೋಗ ಮಾಡಿಕೊಂಡಿದ್ದಾರೆ. ಎರಡು ತಿಂಗಳ ಕಾಲ ಜನರಿಗೆ ಸೀಮೆಎಣ್ಣೆ ವಿತರಿಸಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟು ಮಾಡಿದ್ದಾರೆ. ಅಂಗಡಿಗೆ ಅಮಾನತು ಆದೇಶವಿದ್ದರೂ ರಾಜಕೀಯ ವ್ಯಕ್ತಿಗಳ ಪ್ರಭಾವ ಬಳಸಿ ಅದನ್ನು ರದ್ದು ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಅವ್ಯವಹಾರ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ನ್ಯಾಯಬೆಲೆ ಅಂಗಡಿ ಮಾಲೀಕರ ವರ್ತನೆಯಿಂದ ಬಡವರಾದ ಪಡಿತರ ಚೀಟಿದಾರರು ಸಂಕಷ್ಟ ಅನುಭವಿಸು ವಂತಾಗಿದೆ. ನಿಗದಿತ ಬೆಲೆಗಿಂತ ಹೆಚ್ಚಿನ ಹಣ ನೀಡುತ್ತಿದ್ದರೂ ಸಮರ್ಪಕವಾಗಿ ಆಹಾರ ಧಾನ್ಯಗಳು ದೊರೆಯುತ್ತಿಲ್ಲ. ಆದ್ದರಿಂದ ಇವರ ವಿರುದ್ಧ ಜಿಲ್ಲಾ ಆಡಳಿತ ಕಾನೂನು ಕ್ರಮ ಜರುಗಿಸಬೇಕು. ನೊಂದ ಜನತೆಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ತಿಮ್ಮಪ್ಪ, ರಾಮಪ್ಪ, ಮಂಜುನಾಥ, ಗಿರಯಮ್ಮ, ದ್ಯಾಮಕ್ಕ, ಜಯಮ್ಮ, ರಾಮಯ್ಯ, ಪಾರ್ವತಮ್ಮ ಸೇರಿದಂತೆ ಮತ್ತಿತರ ಗ್ರಾಮಸ್ಥರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.