ADVERTISEMENT

ಪಕ್ಷದ ಸಿದ್ಧಾಂತ, ಸಾಮರ್ಥ್ಯವೇ ಮಾನದಂಡ

ಲೋಕಸಭಾ ಅಭ್ಯರ್ಥಿ ಆಯ್ಕೆ ಕುರಿತು ಚಲ್ಲಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 4:42 IST
Last Updated 12 ಸೆಪ್ಟೆಂಬರ್ 2013, 4:42 IST

ಚಿತ್ರದುರ್ಗ: ‘ಕಾಂಗ್ರೆಸ್‌ ತತ್ವ ಸಿದ್ಧಾಂತದ ಬದ್ಧತೆ ಹಾಗೂ ಗೆಲ್ಲುವ ಸಾಮರ್ಥ್ಯದ ಮಾನದಂಡಗಳೊಂದಿಗೆ ಮುಂದಿನ ಲೋಕಸಭಾ ಚುನಾವಣಾ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ಎಐಸಿಸಿ ಕಾರ್ಯದರ್ಶಿ, ಪಕ್ಷದ ರಾಜ್ಯ ಉಸ್ತುವಾರಿ ಡಾ.ಚಲ್ಲಕುಮಾರ್‌ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಮಾನದಂಡಗಳ ಜತೆಗೆ ಕಾರ್ಯಕರ್ತರು, ಮುಖಂಡರು ಹಾಗೂ ಪಕ್ಷದ ಅಭಿಮಾನಿಗಳ  ಅಭಿಪ್ರಾಯವನ್ನು  ಸಂಗ್ರಹಿಸಿ, ವರದಿ ತಯಾರಿಸಿ  ಹೈಕಮಾಂಡ್‌ಗೆ  ಸಲ್ಲಿಸಲಾಗುತ್ತದೆ.  ಪಕ್ಷದ ವರಿಷ್ಠರು ಅಂತಿಮವಾಗಿ  ಅಭ್ಯರ್ಥಿಗಳನ್ನು ಆಯ್ಕೆ  ಮಾಡುತ್ತಾರೆ’ ಎಂದು  ಅವರು ಸ್ಪಷ್ಟಪಡಿಸಿದರು.

ಲೋಕಸಭೆಗೆ ಉತ್ತಮ ಹಾಗೂ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂಬ ಉದ್ದೇಶದೊಂದಿಗೆ ರಾಜ್ಯದ ಎಲ್ಲ ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಕಾಂಗ್ರೆಸ್‌ ಪ್ರಜಾಪ್ರಭುತ್ವ ಸಿದ್ಧಾಂತದ ತಳಹದಿಯ ಮೇಲೆ ಕಾರ್ಯ­ನಿರ್ವಹಿಸುತ್ತಿದೆ. ಹಾಗಾಗಿ, ಎಲ್ಲರೂ ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ’ ಎಂದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಲೋಕಸಭಾ ಉಪಚುನಾವಣೆಯ ಎರಡು ಕ್ಷೇತ್ರ ಹಾಗೂ ಒಂದು ಮೇಲ್ಮನೆ ಚುನಾವಣೆಯಲ್ಲಿ ಮತದಾರರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. 120 ದಿನಗಳಲ್ಲಿ ರಾಜ್ಯದಲ್ಲಾಗಿರುವ ಸಾಧನೆ­ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷ ಡಾ.ಪರಮೇಶ್ವರ್ ಅವರ ಶ್ರಮದ ಫಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಹೀಗೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಹೇಳಿದರು.

‘ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಅಶಿಸ್ತು ತಾಂಡವವಾಡುತ್ತಿದೆ, ಮುಖಂಡರ ವಿರುದ್ಧವೇ ಕಾರ್ಯಕರ್ತರು ಪ್ರತಿಭಟಿಸುತ್ತಾರೆ. ಹಿಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಶಾಸಕರು, ಕಾರ್ಯಕರ್ತರೆಲ್ಲರೂ ಕೆಲಸ ಮಾಡಿದ್ದಾರೆ. ಈ ಬಗ್ಗೆ ಅಭ್ಯರ್ಥಿಯೇ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ’ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಚಲ್ಲಕುಮಾರ್, ‘ಪ್ರಜಾಪ್ರಭುತ್ವವ ಸಿದ್ಧಾಂತವಿರುವ ಪಕ್ಷದಲ್ಲಿ ಇದೆಲ್ಲ ಸಾಮಾನ್ಯ. ಎಲ್ಲರಿಗೂ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶವಿದೆ. ಆದರೆ, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳುತ್ತವೆ. ಇಂಥ ಯಾವುದೇ ದೂರುಗಳು ನಮಗೆ ಬಂದಿಲ್ಲ. ಮುಂದೆ ಪಕ್ಷದ ಸಿದ್ಧಾಂತ, ನಿಯಮ, ಶಿಸ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎ.ಸೇತೂರಾಮ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್‌ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.