ADVERTISEMENT

ಪಕ್ಷಿ ದಾಹ ನೀಗಿಸುವ ‘ಭಗೀರಥ’

ಕೋಟೆಯಲ್ಲಿಯೊಬ್ಬ ಪಕ್ಷಿಪ್ರೇಮಿ ಏಕಾಂತಯ್ಯಗೆ ಸಾಥ್‌ ನೀಡುವ ವಾಯು ವಿಹಾರಿಗಳು

​ಪ್ರಜಾವಾಣಿ ವಾರ್ತೆ
Published 22 ಮೇ 2018, 11:03 IST
Last Updated 22 ಮೇ 2018, 11:03 IST
ಚಿತ್ರದುರ್ಗ ಕೋಟೆ ಆವರಣದಲ್ಲಿ ಪಕ್ಷಿಗಳ ದಾಹ ನೀಗಿಸಲು  ದೋಣೆಗಳಿಗೆ ನೀರು ಹಾಕುತ್ತಿರುವ ಏಕಾಂತಯ್ಯ
ಚಿತ್ರದುರ್ಗ ಕೋಟೆ ಆವರಣದಲ್ಲಿ ಪಕ್ಷಿಗಳ ದಾಹ ನೀಗಿಸಲು ದೋಣೆಗಳಿಗೆ ನೀರು ಹಾಕುತ್ತಿರುವ ಏಕಾಂತಯ್ಯ   

ಚಿತ್ರದುರ್ಗ: ‘ಪಕ್ಷಿಗಳು ಬಾಯಾರುತ್ತಿವೆ. ಮಡಿಕೆ–ಕುಡಿಕೆಯಲ್ಲಿ ನೀರಿಡಿ’, ‘ಪ್ರಾಣಿ, ಪಕ್ಷಿಗಳ ದಾಹ ನೀಗಿಸಿ’ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಣ್ಣಿಗೆ ಬೀಳುತ್ತವೆ. ಆದರೆ, ಇದನ್ನು ಅಕ್ಷರಶಃ ಕಾರ್ಯಗತಗೊಳಿಸುವ ಮೂಲಕ ಇಳಿ ವಯಸ್ಸಿನಲ್ಲೂ ಪಕ್ಷಿ ಪ್ರೇಮ ಮೆರೆದವರು ಇಲ್ಲಿನ ಏಕಾಂತಯ್ಯ.

ಐತಿಹಾಸಿಕ ಕೋಟೆ ಪ್ರವೇಶಿಸಿ ಮದ್ದು ಬೀಸುವ ಕಲ್ಲುಗಳ ಕಡಗೆ ಸಾಗಿದರೆ ಏಕಾಂತಯ್ಯ ಕಾಣಸಿಗುತ್ತಾರೆ. ಅಲ್ಲಲ್ಲಿ ಇರುವ ನೀರಿನ ಕಲ್ಲಿನ ದೋಣೆಗಳಿಗೆ ಕುಡಿಯುವ ನೀರು ತುಂಬಿಸುತ್ತಾರೆ. ನಿತ್ಯವೂ ಎರಡು–ಮೂರು ಗಂಟೆ ಪಕ್ಷಿಗಳ ದಾಹ ನೀಗಿಸುವ ಕೆಲಸ ಮಾಡುತ್ತಾರೆ.

‘ಅದೊಂದು ದಿನ ಕೋಟೆಯಲ್ಲಿ ಕುಳಿತಿದ್ದಾಗ ಪ್ರಖರ ಬಿಸಿಲಿತ್ತು. ನೀರಿಗಾಗಿ ಹಕ್ಕಿಗಳು ಹಪಹಪಿಸುತ್ತಿದ್ದವು. ಕುಡಿಯಲು ನೀರು ಸಿಗುತ್ತಿರಲಿಲ್ಲ. ನನ್ನ ಬಳಿ ಇದ್ದ ಬಾಟಲಿಯ ನೀರನ್ನು ದೋಣೆಗೆ ಸುರಿದೆ. ಪಕ್ಷಿಗಳು ದಾಹ ನೀಗಿಸಿಕೊಂಡವು. ಇದರಿಂದ ಉತ್ಸಾಹಗೊಂಡು ಪ್ರತಿನಿತ್ಯವೂ ನೀರುಣಿಸುತ್ತಾ ಬಂದೆ’ ಎನ್ನುತ್ತಾರೆ ಏಕಾಂತಯ್ಯ.

ADVERTISEMENT

ಅಳಿಲು, ಗಿಳಿ, ಕಾಗೆ, ಕೋತಿ, ಜೇನುಹುಳ, ಪಕ್ಷಿಗಳು ಮತ್ತು ರಾತ್ರಿಯ ಸಮಯದಲ್ಲಿ ಪ್ರಾಣಿಗಳು ನೀರು ಕುಡಿಯಲು ಇಲ್ಲಿಗೆ ಬರುತ್ತವೆ. ಹೀಗೆ ಹಲವು ವರ್ಷಗಳಿಂದ ಪಕ್ಷಿಗಳಿಗೆ ನೀರುಣಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಅವರು.

‘ದಿನ ಬಿಟ್ಟು ದಿನ ನೀರಿನ ದೋಣೆಗಳನ್ನು ಸ್ವಚ್ಛಗೊಳಿಸಿ ಮತ್ತೆ ಹೊಸದಾಗಿ ನೀರು ಹಾಕುತ್ತೇನೆ. ಮಧ್ಯಾಹ್ನದ ಹೊತ್ತಿಗೆ ಕುಡಿಯುವ ನೀರು ಬಿಸಿಲಿನ ಝಳಕ್ಕೆ ಬಿಸಿಯಾಗಿರುತ್ತದೆ. ಹಾಗಾಗಿ ಸಂಜೆ ಸಮಯದಲ್ಲೂ ನೀರು ಹಾಕುತ್ತೇನೆ. ಇದರ ಜತೆಗೆ ಉದ್ಯಾನದಲ್ಲಿ ಕೆಲಸ ಮಾಡುವ ಬಸಣ್ಣ, ಲೋಕಣ್ಣ ಅವರು ಸಾಥ್ ನೀಡಿದ್ದಾರೆ’ ಎಂದು ಅವರು ಹೇಳಿದರು.

‘2015ರಲ್ಲಿ ತೀವ್ರ ಬರಗಾಲ ಉಂಟಾಗಿ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿತ್ತು. ಕೋಟೆಯ ಹೊಂಡ ಬಿಟ್ಟು ಎಲ್ಲಿಯೂ ನೀರು ಇರಲಿಲ್ಲ. ಪಕ್ಷಿಗಳು ನೀರು ಅರಸಿ ಎಲ್ಲಿಗೆ ಹೋಗಬೇಕು? ಎಂಬ ಪ್ರಶ್ನೆ ಕಾಡಿತು. ಹಾಗಾಗಿ ಈ ಕಾರ್ಯದಲ್ಲಿ ನಿರತನಾಗಿದ್ದೇನೆ. ಇಲ್ಲಿರುವ ಪಕ್ಷಿಗಳು ವಲಸೆ ಹೋಗದಂತೆ ನೋಡಿಕೊಂಡಿದ್ದೇನೆ’ ಎನ್ನುವಾಗ ಅವರ ಮುಖದಲ್ಲಿ ಹೆಮ್ಮೆಯ ಭಾವವಿತ್ತು.

‘ಇಲ್ಲಿ ನೂರಾರು ಗಿಳಿ, ಅಳಿಲು, ಕೌಜುಗ, ಪಾರಿವಾಳ ಸೇರಿದಂತೆ ಎಲ್ಲ ರೀತಿಯ ಪಕ್ಷಿಗಳಿವೆ. ಮದ್ದು ಬೀಸುವ ಕಲ್ಲುಗಳ ಪಕ್ಕದಲ್ಲಿ ನವಿಲು ಗುಡ್ಡವಿದೆ. ಇವುಗಳಿಗೂ ನೀರಿನ ಅವಶ್ಯಕತೆ ಇರುವುದರಿಂದ ಏಕಾಂತಯ್ಯ ಅವರ ಸೇವೆ ಅವಿಸ್ಮರಣೀಯ’ ಎನ್ನುತ್ತಾರೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಸತ್ಯಪ್ಪ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನಾಚಾರಿ.

‘ಹಲವಾರು ವರ್ಷಗಳಿಂದ ನಿಷ್ಠೆಯಿಂದ ಸೇವೆ ಮಾಡುತ್ತಿದ್ದಾರೆ. ಅವರ ಆರೋಗ್ಯವೂ ಹದಗೆಟ್ಟಿದೆ. ಬಿಂದಿಗೆ ಎತ್ತುವ ಸಾಮರ್ಥ್ಯವಿಲ್ಲ. ಕೆಲ ಯುವಕರ ನೆರವು ಪಡೆದು ನೀರುಣಿಸುತ್ತಿದ್ದಾರೆ’ ಎನ್ನುತ್ತಾರೆ ಬೆಸ್ಕಾಂ ನಿವೃತ್ತ ಉದ್ಯೋಗಿ ಕುಬೇರನಾಯ್ಕ.

- ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.