ADVERTISEMENT

ಪರ್ಯಾಯ ಆಯ್ಕೆಯತ್ತ ಮತದಾರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 5:57 IST
Last Updated 8 ಏಪ್ರಿಲ್ 2013, 5:57 IST
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಜೆಡಿಯು ಪಕ್ಷದ ನೂತನ ಕಚೇರಿ ಉದ್ಘಾಟನೆಯಲ್ಲಿ ಜೆಡಿಯು ರಾಜ್ಯ ಅಧ್ಯಕ್ಷ ಎಂ.ಪಿ. ನಾಡಗೌಡ ಮಾತನಾಡಿದರು.
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಜೆಡಿಯು ಪಕ್ಷದ ನೂತನ ಕಚೇರಿ ಉದ್ಘಾಟನೆಯಲ್ಲಿ ಜೆಡಿಯು ರಾಜ್ಯ ಅಧ್ಯಕ್ಷ ಎಂ.ಪಿ. ನಾಡಗೌಡ ಮಾತನಾಡಿದರು.   

ಚಿತ್ರದುರ್ಗ: ರಾಜ್ಯದಲ್ಲಿ ಇದುವರೆಗೆ ಅಧಿಕಾರ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳ ಆಡಳಿತ ವೈಖರಿಯಿಂದ ಜನ ಬೇಸತ್ತಿದ್ದಾರೆ. ಈಗ ಮತದಾರರು ಪರ್ಯಾಯ ಆಯ್ಕೆ ಬಯಸಿದ್ದಾರೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ. ನಾಡಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ನಡೆದ ಜೆಡಿಯು ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಜೆಡಿಯು ಜನರ ಮುಂದಿರುವ ಸೂಕ್ತ ಆಯ್ಕೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ತನ್ನ ದುರಾಡಳಿತದಿಂದಾಗಿ ಅಸ್ತಿತ್ವ ಕಳೆದುಕೊಂಡಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಗರಣಗಳ ಸರಮಾಲೆಯಲ್ಲಿ ಸಿಲುಕಿಕೊಂಡಿದೆ. ಇನ್ನೂ ಪ್ರಾದೇಶಿಕ ಪಕ್ಷ ಎಂದು ಪ್ರತಿಪಾದಿಸಿಕೊಳ್ಳುವ ಜೆಡಿಎಸ್ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಜೆಡಿಯುಗೆ ಆಶೀರ್ವಾದ ಮಾಡಿದರೆ ಉತ್ತಮ ಆಡಳಿತ ನೀಡಲಿದೆ ಎಂದು ಭರವಸೆ ನೀಡಿದರು. 

ರಾಜ್ಯದ ಎಲ್ಲ 224 ಕ್ಷೇತ್ರಗಳಿಗೆ ಜೆಡಿಯು ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ದೃಷ್ಟಿಯಿಂದ ಕೆಲವು ಸಣ್ಣಪುಟ್ಟ ಪಕ್ಷಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಿರೀಕ್ಷೆಗೂ ಮೀರಿ ಯುವಕರ ಪಡೆ ಜೆಡಿಯು ಪಕ್ಷತದತ್ತ ಬರುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಪಕ್ಷ ಪ್ರವರ್ಧಮಾನಕ್ಕೆ ಬರಲಿದೆ ಎಂದರು.

ದೇಶದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಬಡವ-ಶ್ರೀಮಂತರ ನಡುವೆ ಬೃಹತ್ ಪ್ರಮಾಣದಲ್ಲಿ ಅಂತರ ಏರ್ಪಟ್ಟಿದೆ. ಹೈಟೆಕ್ ಮಾದರಿ ಶಿಕ್ಷಣ ವ್ಯವಸ್ಥೆ, ಆಸ್ಪತ್ರೆಗಳು ಹಣವಂತರಿಗೆ ಮಾತ್ರ ಸೀಮಿತವಾಗಿವೆ. ಇದರಿಂದಾಗಿ ದೇಶ `ಇಂಡಿಯಾ' ಹಾಗೂ `ಭಾರತ' ಎನ್ನುವ ಎರಡು ಭಾಗವಾಗುತ್ತಿದೆ. ದೇಶದಲ್ಲಿ ಉಳ್ಳವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಅವಕಾಶ ವಂಚಿತರಾಗಿದ್ದಾರೆ. ದೇಶದಲ್ಲಿ ಇಂತಹ ತಾರತಮ್ಯ ನಿವಾರಣೆ ಮಾಡುವಂತಹ ಸರ್ಕಾರ ಆಡಳಿತಕ್ಕೆ ಬರಬೇಕಾದ ಅಗತ್ಯವಿದೆ.

ರಾಜ್ಯದಲ್ಲಿ ಜೆಡಿಯು ಅಧಿಕಾರಕ್ಕೆ ಬಂದಲ್ಲಿ ಬಿಹಾರ್ ರಾಜ್ಯದ ಮಾದರಿಯಲ್ಲಿ ಉತ್ತಮ ಆಡಳಿತ ನೀಡಲಿದೆ ಎಂದು ನುಡಿದರು.
ಮಹಾನಗರಗಳಲ್ಲಿ ಕೋಟಿ ಕೋಟಿ ಹಣ ವೆಚ್ಚ ಮಾಡಿ ಬೃಹತ್ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ, ಇವುಗಳ ಪ್ರಯೋಜನ ಜನಸಾಮಾನ್ಯರಿಗೆ ದೊರೆಯುತ್ತಿಲ್ಲ. ದೇಶದಲ್ಲಿ ಎಲ್ಲ ಯೋಜನೆಗಳ ಸೌಕರ್ಯ ಜನಸಾಮಾನ್ಯರಿಗೆ ತಲುಪುವಂತಾಗಬೇಕು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಚ್. ಶಶಿಧರ್‌ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.