ADVERTISEMENT

ಪೊಲೀಸ್ ದೌರ್ಜನ್ಯ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2011, 6:15 IST
Last Updated 28 ಸೆಪ್ಟೆಂಬರ್ 2011, 6:15 IST
ಪೊಲೀಸ್ ದೌರ್ಜನ್ಯ ಆರೋಪ: ಪ್ರತಿಭಟನೆ
ಪೊಲೀಸ್ ದೌರ್ಜನ್ಯ ಆರೋಪ: ಪ್ರತಿಭಟನೆ   

ಮೊಳಕಾಲ್ಮುರು: ಲಾರಿ ಚಾಲಕರಿಬ್ಬರ ಜಗಳ ತಾರಕಕ್ಕೆ ಹೋದ ಘಟನೆಯನ್ನು ಶಮನ ಮಾಡಲು ಹೋದಾಗ ಪೊಲೀಸ್ ಸಿಬ್ಬಂದಿ ಅನಗತ್ಯವಾಗಿ ಚಾಲಕನೊಬ್ಬನಿಗೆ ಥಳಿಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಮಂಗಳವಾರ ತಾಲ್ಲೂಕಿನ ಬಿ.ಜಿ. ಕೆರೆ ಪೊಲೀಸ್‌ಠಾಣೆ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು.

ಘಟನೆ ವಿವರ: ಬಳ್ಳಾರಿ ಸಮೀಪದ ಬೆಂಗಳೂರು-ಬಳ್ಳಾರಿ ಹೆದ್ದಾರಿಯಲ್ಲಿನ ಓಬಳಾಪುರ ರೈಲ್ವೆಗೇಟ್ ಬಳಿ ಲಾರಿಯನ್ನು ಹಿಂದಕ್ಕೆ ಹಾಕುವ ವಿಷಯಕ್ಕೆ ಸಂಬಂಧಪಟ್ಟಂತೆ ರಾಯಚೂರು ಮೂಲದ ಚಾಲಕ ಗದ್ದಪ್ಪ ಹಾಗೂ ಮತ್ತೊಬ್ಬ ಚಾಲಕ ಬಿ.ಜಿ. ಕೆರೆಯ ಚಿತ್ತಯ್ಯ ಎಂಬುವವರ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ದಾರಿಯುದ್ದಕ್ಕೂ ವಾಹನಗಳು ತಿಕ್ಕಾಡಿಕೊಂಡು ಬಿ.ಜಿ.ಕೆರೆಗೆ ಬಂದಾಗ ವಾಗ್ವಾದ ತಾರಕಕ್ಕೆ ಏರಿತು ಎನ್ನಲಾಗಿದೆ.

ಗಲಾಟೆ ಹೆಚ್ಚಾಗಿ ಜನಸಂದಣಿ ಉಂಟಾದ ಹಿನ್ನೆಲೆಯಲ್ಲಿ ಬಿ.ಜಿ. ಕೆರೆ ಠಾಣೆ ಸಿಬ್ಬಂದಿಯೊಬ್ಬರು ಚಾಲಕರಿಗೆ ಹೊಡೆದಿದ್ದಾರೆ. ಈ ಪೈಕಿ ಚಿತ್ತಯ್ಯಗೆ ಹೆಚ್ಚಿನ ಪೆಟ್ಟಾಗಿರುವ ವಿಷಯ ತಿಳಿದು ಹಲವು ಗ್ರಾಮಸ್ಥರು ಠಾಣೆ ಎದುರು ಜಮಾಯಿಸಿ  ಪ್ರತಿಭಟಿಸಿದರು. ಸ್ಥಳಕ್ಕೆ ಪಿಎಸ್‌ಐ ಕೊಟ್ರೇಶ್ ಭೇಟಿ ನೀಡಿದ್ದರು.

ಲಾರಿ ಚಾಲಕರು ಮದ್ಯಪಾನ ಸೇವಿಸಲು ಲಾರಿಗಳನ್ನು ಬೇಕಾಬಿಟ್ಟಿ ರಸ್ತೆಬದಿ ನಿಲ್ಲಿಸುವುದು ಹಾಗೂ ಗಲಾಟೆ ಮಾಡಿಕೊಳ್ಳುವುದು ಹೆಚ್ಚಿದ್ದು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.