ADVERTISEMENT

ಪ್ರತಿಭಾವಂತ ಮಕ್ಕಳು ಸಮಾಜದ ದೊಡ್ಡ ಆಸ್ತಿ; ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 9:30 IST
Last Updated 15 ಅಕ್ಟೋಬರ್ 2012, 9:30 IST

ಹಿರಿಯೂರು: ಮಕ್ಕಳಿಗೆ ಆಸ್ತಿ ಮಾಡುವ ಬದಲು ಉನ್ನತಮಟ್ಟದ ವಿದ್ಯೆ ಕೊಡಿಸಿದರೆ ಅದು ಎಲ್ಲಾ ಆಸ್ತಿಗಿಂತ ದೊಡ್ಡದು. ಪ್ರತಿಭಾವಂತ ಮಕ್ಕಳು ಅವರು ಹುಟ್ಟಿದ ಸಮಾಜಕ್ಕೆ ಬಹುದೊಡ್ಡ ಆಸ್ತಿ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಟಿ.ಬಿ. ಜಯಚಂದ್ರ ತಿಳಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ತಾಲ್ಲೂಕು ಕುಂಚಿಟಿಗರ ಸಂಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಪೋಷಕರ ಕರ್ತವ್ಯ. ವಿದ್ಯೆ-ಉದ್ಯೋಗ ಪಡೆಯುವುದು ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ.

ಎಲ್ಲಾ ಕ್ಷೇತ್ರಗಳಲ್ಲೂ ತೀವ್ರತರವಾದ ಪೈಪೋಟಿ ಇದ್ದು, ಅದಕ್ಕೆ ತಕ್ಕಂತೆ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ, ಗುಣಮಟ್ಟದ ಶಿಕ್ಷಣ ಕೊಡಿಸಿ ಅಣಿಗೊಳಿಸಬೇಕಿದೆ. ಕುಂಚಿಟಿಗ ಜನಾಂಗವನ್ನು ಒಬಿಸಿ ಪಟ್ಟಿಯಲ್ಲಿ  ಸೇರ್ಪಡೆ ಮಾಡದಿರುವುದರ ಬಗ್ಗೆ ಹಿಂದುಳಿದ ವರ್ಗಗಳ ಸಮಿತಿ ಗಮನಸೆಳೆದಿದ್ದು, ಪುನರ್ ಪರಿಶೀಲಿಸುವ ಭರವಸೆ ಸಿಕ್ಕಿದೆ. ಈ ಕುರಿತಂತೆ 15 ದಿನಗಳ ಒಳಗೆ ದೆಹಲಿಗೆ ನಿಯೋಗ ಹೋಗುವುದಾಗಿ ಅವರು ಹೇಳಿದರು.

ಕುಂಚಿಟಿಗರ ಮಹಾಮಂಡಳದ ರಾಜ್ಯಾಧ್ಯಕ್ಷ ದೇವರಾಜಯ್ಯ ಮಾತನಾಡಿ, ಕುಂಚಿಟಿಗ ಜನಾಂಗದವರು ನಮ್ಮಲ್ಲಿನ ವ್ಯತ್ಯಾಸಗಳನ್ನು ಬದಿಗಿಟ್ಟು, ಜನಾಂಗದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ. ಕುಂಚಿಟಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಿಂದ ವಿಧಾನಸಭೆಗೆ ಕನಿಷ್ಠ ನಾಲ್ಕು ಜನರನ್ನಾದರೂ ಆಯ್ಕೆ ಮಾಡಿಕಳುಹಿಸಬೇಕು. ಸ್ಥಳೀಯ ಅಭ್ಯರ್ಥಿಯನ್ನು ಶಾಸಕರಾಗಿ ಆಯ್ಕೆ ಮಾಡಲು ಜನಾಂಗದವರು ಮುಂದಾಗಬೇಕು ಎಂದು ಕರೆ ನೀಡಿದರು.

ವಂದೇಮಾತರಂ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸಿ. ಮಹೇಶ್ ಮಾತನಾಡಿ, ಜನಾಂಗದಲ್ಲಿರುವ ಮುಖಂಡರು ಪರಸ್ಪರ ಕಾಲೆಳೆಯುವ ಪ್ರವೃತ್ತಿ ನಿಲ್ಲಿಸದಿದ್ದರೆ, ಯಾವುದೇ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಕೆ.ದ್ಯಾಮೇಗೌಡ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಅರುಣಾ ಪಟೇಲ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ. ಜಯಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಸಿದ್ದೇಗೌಡ, ಚಂದ್ರಣ್ಣ, ಬಸವಾನಂದ, ಬಿ.ಕೆ. ಜ್ಞಾನದೇವಪ್ಪ,ಮುರಳೀಧರ, ಹಾಲಪ್ಪ, ರಾಜುಗೌಡ, ಹೆಂಜಾರಪ್ಪ, ಎಂ.ಎಲ್. ಗಿರಿಧರ, ಏಕಾಂತಪ್ಪ  ಉಪಸ್ಥಿತರಿದ್ದರು. ಕುಂಚಿಟಿಗ ಮಹಾಸಂಸ್ಥಾನದ ಹನುಮಂತಸ್ವಾಮಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT