ADVERTISEMENT

ಪ್ರಾಚೀನ ಐತಿಹಾಸಿಕ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ಮೇ 2011, 6:15 IST
Last Updated 10 ಮೇ 2011, 6:15 IST

ಹಿರಿಯೂರು: ಸಮಾಜಕ್ಕೆ ಪೂರಕವಾದ ಪ್ರಾಚೀನ ಇತಿಹಾಸದ ಬಗ್ಗೆ ಸಂಶೋಧಕರು, ಬರಹಗಾರರು ಅರಿವು ಮೂಡಿಸಿಕೊಳ್ಳಬೇಕು ಎಂದು ಹಂಪಿಯ ಕನ್ನಡ ವಿವಿಯ ಪ್ರೊ.ಲಕ್ಷ್ಮಣ್ ತೆಲಗಾವಿ ಕರೆ ನೀಡಿದರು.ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಭಾನುವಾರ ಅಹೋಬಲ ನರಸಿಂಹಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ವಾಲ್ಮೀಕಿ ಸಾಹಿತ್ಯ ಸಂಪದ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಾಲ್ಮೀಕಿ ನಾಯಕ ಸಮುದಾಯದ ಬರಹಗಾರರ ದ್ವಿತೀಯ ಮಹಾ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ಥಳೀಯ ಜನರಿಗೆ ತಮ್ಮ ಊರಿನಲ್ಲಿ ಹಿಂದೆ ಆಗಿರುವ ಘಟನಾವಳಿಗಳ ಮಾಹಿತಿ ಇಲ್ಲ. ತಾವು ಅದ್ಭುತ ಇತಿಹಾಸವನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ ಗ್ರಾಮದಲ್ಲಿ ನೆಲೆಸಿದ್ದೇವೆ ಎಂಬ ಕಲ್ಪನೆಯಿಲ್ಲ. ಇಂತಹ ವಿಚಾರ ಸಂಕಿರಣಗಳ ಮೂಲಕ ಗ್ರಾಮದ ಜನತೆಗೆ, ಬರಹಗಾರರಿಗೆ, ಸಂಶೋಧಕರಿಗೆ ಇತಿಹಾಸದ ಬಗ್ಗೆ ಅರಿವು, ಆಸಕ್ತಿ ಜತೆಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.

ಹರ್ತಿಕೋಟೆಯಲ್ಲಿ ಶ್ರೀಮಂತ ಇತಿಹಾಸವಿದೆ. ಎಲ್ಲಾ ಜನಾಂಗಕ್ಕೂ ಕಟ್ಟೆ ಮನೆಯಾಗಿ ಈ ಗ್ರಾಮ ಬೆಳಕಿಗೆ ಬಂದಿದೆ. ಇತಿಹಾಸ ಸಂಶೋಧಕರು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸುವ ಮೂಲಕ ಇತಿಹಾಸದ ಮೇಲೆ ಬೆಳಕು ಚೆಲ್ಲಬೇಕು.
 
ಚಿತ್ರದುರ್ಗ ಜಿಲ್ಲೆಯಲ್ಲಿನ ಇತಿಹಾಸ ಆ ಕ್ಷೇತ್ರದಲ್ಲಿ ಆಸಕ್ತಿ ಇರುವ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ ಎಂದು ಸಮಾರಂಭ ಉದ್ಘಾಟಿಸಿದ ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ವಿ. ಶ್ರೀನಿವಾಸ್ ತಿಳಿಸಿದರು.

ವಿಜಯನಗರದ ಶ್ರೀಕೃಷ್ಣ ದೇವರಾಯ ವಿವಿಯ ಕುಲ ಸಚಿವ ಡಾ.ರಂಗರಾಜ ವನದುರ್ಗ, ಬೆಂಗಳೂರಿನ ಸಂಶೋಧಕ ಡಾ. ಎಂ.ಜಿ. ನಾಗರಾಜ್, ಸಮ್ಮೇಳನಾಧ್ಯಕ್ಷ ದೇವೇಂದ್ರ ಮಾಧವನವರ ಮಾತನಾಡಿದರು.

ಸಂಶೋಧಕ ಬಿ. ರಾಜಶೇಖರಪ್ಪ, ಹರ್ತಿಕೋಟೆ ವೀರೇಂದ್ರಸಿಂಹ, ಡಾ.ಸ್.ಜಿ. ರಾಮದಾಸರೆಡ್ಡಿ, ಡಾ. ಎಂ.ಕೊಟ್ರೇಶ್, ಡಾ.ಚಿತ್ತಯ್ಯ ಪೂಜಾರ್, ಡಾ.ಎಸ್.ವೈ. ಸೋಮಶೇಖರ್, ಡಾ.ಅಮರೇಶ ಯತಗಲ್, ಡಾ.ಡಿ.ಎನ್. ಯೋಗೀಶ್ವರಪ್ಪ, ಡಾ.ಎಂ.ಕೆ. ದುರುಗಪ್ಪ, ಡಾ.ತಾರಿಹಳ್ಳಿ ಹನುಮಂತಪ್ಪ, ಕೆ.ಎಲ್.ರಾಜಶೇಖರ್, ಡಾ. ರಂಗಯ್ಯ, ರತ್ನಾ ಡಾ ರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು. ವೀರೇಂದ್ರಸಿಂಹ ಸ್ವಾಗತಿಸಿದರು. ಪ್ರತಾಪ್‌ಸಿಂಹ ವಂದಿಸಿದರು. ರಾಜ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.