ADVERTISEMENT

ಫೇರ್ ಮೀಟರ್ ದರದಂತೆ ಹಣ ಪಡೆಯಿರಿ

ಹೆಚ್ಚುಹಣ ಪಡೆದರೆ ಕಠಿಣ ಕ್ರಮ: ಆರ್‌ಟಿಓ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 11:08 IST
Last Updated 11 ಡಿಸೆಂಬರ್ 2012, 11:08 IST

ಚಿತ್ರದುರ್ಗ: ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರು ಫೇರ್ ಮೀಟರ್ ದರದಂತೆ ಪ್ರಯಾಣಿಕರಿಂದ ಹಣ ಪಡೆಯದೇ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಅಂತಹ ಆಟೋರಿಕ್ಷಾಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಜೆ. ತೆಂಬದ್ ತಿಳಿಸಿದ್ದಾರೆ.

ಆಟೋರಿಕ್ಷಾ ದರವನ್ನು ಈಗಾಗಲೇ 2012ರ ಮೇ 9ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರವಾದಂತೆ 2 ಕಿ.ಮೀ. ವ್ಯಾಪ್ತಿಗೆ ಕನಿಷ್ಠ್ಙ 18 ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ ರೂ 9 ಹಾಗೂ ರಾತ್ರಿ 10ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ನಿಗದಿತ ದರದ ಒಂದೂವರೆ ಪಟ್ಟು ಹೆಚ್ಚಿನ ದರವನ್ನು ಆಟೋಮೀಟರ್ ಚಾಲನೆಯಲ್ಲಿಟ್ಟು ಪಡೆಯಬೇಕು ಎಂದು ಸೂಚಿಸಿದ್ದಾರೆ.

ಆದರೆ, ಫೇರ್‌ಮೀಟರ್ ಚಾಲನೆಯಲ್ಲಿಡದೆ ಹೆಚ್ಚಿನ ದರವನ್ನು ಸಾರ್ವಜನಿಕರಿಂದ ವಸೂಲಿ ಮಾಡುತ್ತಿರುವುದು ಹಾಗೂ ಸಾರ್ವಜನಿಕರ ಜತೆ ಅಸಭ್ಯವಾಗಿ ವರ್ತಿಸುವುದು, ಸಮವಸ್ತ್ರ ಧರಿಸದೆ, ವಾಹನ ಚಾಲನಾ ಪರವಾನಗಿ ಹೊಂದದೆ, ಅರ್ಹತಾ ಪತ್ರ ನವೀಕರಣ, ರಹದಾರಿ ಇಲ್ಲದೇ ಸಂಚರಿಸುತ್ತಿರುವುದು ಸಹ ಗಮನಕ್ಕೆ ಬಂದಿದೆ. ಆಟೋ ರಿಕ್ಷಾದವರು ಚಾಲಕನ ಪಕ್ಕದ ಎರಡು ಬದಿ ಪ್ರಯಾಣಿಕರನ್ನು ಕೊಂಡೊಯ್ಯುವುದು ಮತ್ತು ಸರಕು ಅಫೆ ವಾಹನದಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಬಸ್ ಮಾಲೀಕರು ಸಹ ಮನವಿ ಸಲ್ಲಿಸಿ ಆಫೆ ಆಟೋದವರು ಸರಕು ಸಾಗಣೆ ಬದಲಾಗಿ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದಾರೆ. ಇದರಿಂದ ರಹದಾರಿ ಹೊಂದಿರುವ ನಮಗೆ ನಷ್ಟ ಉಂಟಾಗುತ್ತಿದೆ ಕ್ರಮಕೈಗೊಳ್ಳಲು ಕೋರಿದ್ದಾರೆ. ಆದ್ದರಿಂದ ಆಟೋರಿಕ್ಷಾದವರು ಫೆರ್‌ಮೀಟರ್ ಚಾಲನೆಯಲ್ಲಿಟ್ಟು ಪ್ರಯಾಣಿಕರಿಂದ ಹಣ ಪಡೆಯಬೇಕು. ನಿಯಮ ಬಾಹಿರವಾಗಿಸಂಚರಿಸುವ ವಾಹನಗಳ ಮೇಲೆ ಕಾನೂನುಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.