ADVERTISEMENT

ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 29 ಮೇ 2018, 12:19 IST
Last Updated 29 ಮೇ 2018, 12:19 IST
ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು
ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು   

ಚಿತ್ರದುರ್ಗ: ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ನೀಡಿದ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧ್ಯಾಹ್ನದ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿತು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಇಂದಿರಾ ಕ್ಯಾಂಟೀನ್‌ ಗಾಜು ಪುಡಿಗೊಳಿಸಿದ್ದನ್ನು ಹೊರತುಪಡಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಚಿತ್ರದುರ್ಗ ತಾಲ್ಲೂಕಿನ ಗುಡ್ಡದ ರಂಗವ್ವನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ವಾಹನ ತಡೆ ನಡೆಸಲಾಯಿತು.

ಸಾರಿಗೆ ಸಂಚಾರ ಅಸ್ತವ್ಯಸ್ತ:

ADVERTISEMENT

ಹೊಳಲ್ಕೆರೆ ಹೊರತುಪಡಿಸಿ ಉಳಿದೆಡೆ ಸಾರಿಗೆ ಸಂಚಾರ ಸಹಜವಾಗಿತ್ತು. ಆಟೊ, ಸರಕು ಸಾಗಣೆ ವಾಹನ ಬೀದಿಗೆ ಇಳಿದಿದ್ದವು. ಸರ್ಕಾರಿ ಕಚೇರಿ ಬಾಗಿಲು ತೆರೆದಿದ್ದವು. ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. 2018–19ನೇ ಶೈಕ್ಷಣಿಕ ವರ್ಷದ ಆರಂಭದ ದಿನವಾದ ಸೋಮವಾರ ಕೆಲ ಶಾಲೆ–ಕಾಲೇಜುಗಳು ಬಾಗಿಲು ತೆರೆಯಲಿಲ್ಲ. ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಬಿಎಸ್ಸಿ, ಬಿ.ಎ, ಬಿಕಾಂ ಎರಡನೇ ಸೆಮಿಸ್ಟರ್‌ ಇಂಗ್ಲಿಷ್‌ ಹಾಗೂ ಎಂ.ಎಸ್ಸಿ ನಾಲ್ಕನೇ ಸೆಮಿಸ್ಟರ್‌ನ ಗಣಿತ, ರಸಾಯನ ವಿಜ್ಞಾನ ಹಾಗೂ ಭೌತ ವಿಜ್ಞಾನ ಪರೀಕ್ಷೆಗಳು ಸುಗಮವಾಗಿ ನಡೆದವು.

ಮಾನವ ಸರಪಳಿ:

ಪಿ.ಬಿ.ರಸ್ತೆಯಲ್ಲಿ ಔಷಧ ಅಂಗಡಿ ಹೊರತಾಗಿ ಬೇರೆ ಯಾವ ಮಳಿಗೆಗಳು ಬಾಗಿಲು ತೆರೆದಿರಲಿಲ್ಲ. ಆದರೆ, ಸಂತೆಪೇಟೆ, ಕೋಟೆ ರಸ್ತೆ, ಬಿ.ಡಿ.ರಸ್ತೆ, ಮೆದೆಹಳ್ಳಿ ರಸ್ತೆಯಲ್ಲಿ ವಾಣಿಜ್ಯ ವಹಿವಾಟು ಸಹಜವಾಗಿತ್ತು. ಹೋಟೆಲ್‌, ಪೆಟ್ರೋಲ್‌ ಬಂಕ್‌ ಕಾರ್ಯನಿರ್ವಹಿಸಿದವು. ಹಣ್ಣು, ತರಕಾರಿ ಮಾರಾಟಕ್ಕೆ ಬಿಜೆಪಿ ಕಾರ್ಯಕರ್ತರು ಅವಕಾಶ ಮಾಡಿಕೊಟ್ಟರು.

ಪಿ.ಬಿ.ರಸ್ತೆಯ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಬೆಳಿಗ್ಗೆ 8.45ರ ಸುಮಾರಿಗೆ ಜಮಾಯಿಸಿದರು. ಪಕ್ಷದ ಬಾವುಟ ಹಿಡಿದು ಅಂಗಡಿಗಳನ್ನು ಮುಚ್ಚಿಸಿದರು. ‘ಎರಡು ನಾಲಿಗೆಯ ಕುಮಾರಸ್ವಾಮಿಗೆ ಧಿಕ್ಕಾರ’ವೆಂದು ಘೋಷಣೆ ಕೂಗುತ್ತ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಬೆಳಿಗ್ಗೆ 9ರಿಂದ 10.45ರವರೆಗೂ ನಡೆದ ಪ್ರತಿಭಟನೆ, ಬಿಸಿಲು ಏರಿದಂತೆ ನಿಧಾನವಾಗಿ ಕರಗತೊಡಗಿತು. ಇಲ್ಲಿಂದ ಮೆರವಣಿಗೆ ಹೊರಟ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಧಾವಿಸಿ ಮನವಿ ಸಲ್ಲಿಸಿದರು.

‘ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 222 ಕ್ಷೇತ್ರಗಳ ಪೈಕಿ 149 ಕ್ಷೇತ್ರಗಳಲ್ಲಿ ಜೆಡಿಎಸ್‌ ಠೇವಣಿ ಕಳೆದುಕೊಂಡಿದೆ. 16 ಜಿಲ್ಲೆಗಳಲ್ಲಿ ಈ ಪಕ್ಷದ ಒಬ್ಬ ಅಭ್ಯರ್ಥಿ ಕೂಡ ಆಯ್ಕೆಯಾಗಿಲ್ಲ. ಹೀಗಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಆರೋಪಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌, ಬಿಜೆಪಿ ಮುಖಂಡ ಜಿ.ಎಂ.ಸುರೇಶ್‌, ರೈತ ಮೋರ್ಚ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಇದ್ದರು.

ಆಂಬುಲೆನ್ಸ್‌ಗೆ ದಾರಿ ಬಿಟ್ಟರು

ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಹೊಳಲ್ಕೆರೆ ರಸ್ತೆಯಿಂದ ಆಂಬುಲೆನ್ಸ್‌ ಧಾವಿಸಿತು. ಇದರ ಶಬ್ದ ಕಿವಿಗೆ ಬಿದ್ದ ತಕ್ಷಣ ಪ್ರತಿಭಟನಾಕಾರರು ಜಾಗೃತರಾದರು. ಇದಕ್ಕೆ ದಾರಿ ಮಾಡಿಕೊಡುವಂತೆ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹಾಗೂ ಬಿಜೆಪಿ ಮುಖಂಡರು ಸೂಚಿಸಿದರು. ತಕ್ಷಣ ಎಲ್ಲರೂ ರಸ್ತೆಯ ಬದಿಗೆ ಸರಿದು ಆಂಬುಲೆನ್ಸ್‌ ತೆರಳಲು ಅನುವು ಮಾಡಿಕೊಟ್ಟರು.

ದೂರ ಉಳಿದ ರೈತ ಸಂಘ

ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಸೋಮವಾರ ಕರೆ ನೀಡಿದ್ದ ಬಂದ್‌ನಿಂದ ಕರ್ನಾಟಕ ರಾಜ್ಯ ರೈತ ಸಂಘದ ಎರಡು ಬಣಗಳು ದೂರ ಉಳಿದವು.

ಚಿತ್ರದುರ್ಗ ತಾಲ್ಲೂಕಿನ ಜಾನುಕೊಂಡ, ಸಿಂಗಾಪುರ ಸೇರಿ ಹಲವು ಗ್ರಾಮಗಳಲ್ಲಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆದರೆ, ರೈತ ಸಂಘ ಸೇರಿ ಹಲವು ಸಂಘಟನೆಗಳು ಈ ಬಂದ್‌ಗೆ ಬೆಂಬಲ ಸೂಚಿಸಲಿಲ್ಲ. ಚಿತ್ರದುರ್ಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಸಿರು ಟವಲ್‌ನಲ್ಲಿ ಕಾಣಿಸಿಕೊಂಡರು.

**
ಅಧಿಕಾರಕ್ಕೆ ಏರಿದ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ರೈತರ ಕುರಿತು ಅವರಿಗೆ ಕಾಳಜಿ ಇಲ್ಲ
ಜಿ.ಎಚ್‌. ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.