ADVERTISEMENT

ಬರದ ನಡುವೆ ಪ್ರವಾಸಕ್ಕೆ ಜಿ.ಪಂ. ಸದಸ್ಯರ ಸಿದ್ಧತೆ!

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 7:55 IST
Last Updated 15 ಆಗಸ್ಟ್ 2012, 7:55 IST

ಚಿತ್ರದುರ್ಗ: ಜಿಲ್ಲಾ ಪಂಚಾಯ್ತಿ ಸದಸ್ಯರು ಈಗ ಅಧ್ಯಯನ ಪ್ರವಾಸಕ್ಕೆ ಸಜ್ಜಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಇರುವಾಗ ಸದಸ್ಯರು ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಧ್ಯಯನ ನೆಪದಲ್ಲಿ ಇದು ಕೇವಲ ಮೋಜುಮಸ್ತಿ ಮಾಡುವ ಪ್ರವಾಸ ಎನ್ನುವುದು ಸಾರ್ವಜನಿಕರ ಗಂಭೀರ ಆರೋಪ.

ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿ (ಬಿಆರ್‌ಜಿಎಫ್) ಅಡಿಯಲ್ಲಿ ಸದಸ್ಯರ ಅಧ್ಯಯನ ಪ್ರವಾಸಕ್ಕೆ ರೂ. 10 ಲಕ್ಷ ಮೀಸಲಿಡಲಾಗಿದೆ. ವಿವಿಧೆಡೆ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಅಧ್ಯಯನಕ್ಕೆ ಈ ಪ್ರವಾಸವನ್ನು ನಿಗದಿಪಡಿಸಲಾಗಿದೆ.

ADVERTISEMENT

ಜಿ.ಪಂ. ಸದಸ್ಯರು ಉತ್ತರ ಭಾರತಕ್ಕೆ ಪ್ರವಾಸಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಕೆಲವು ಸದಸ್ಯರು ಪ್ರವಾಸಕ್ಕೆ ತೆರಳಲು ನಿರಾಕರಿಸಿದ್ದಾರೆ. ಶೇ 50ರಷ್ಟು ಸದಸ್ಯರು ಮಾತ್ರ ಪ್ರವಾಸಕ್ಕೆ ಸಜ್ಜಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿ.ಪಂ. ಅಧ್ಯಕ್ಷ ರವಿಕುಮಾರ್, ಎಲ್ಲರೂ ಪ್ರವಾಸಕ್ಕೆ ಹೋಗುತ್ತಿಲ್ಲ. ಕೆಲವರು ಮಾತ್ರ ಹೋಗುತ್ತಿದ್ದಾರೆ. ಪ್ರವಾಸಕ್ಕೆ ನಾನು ಸಹ ಹೋಗುತ್ತಿಲ್ಲ. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವಾಗ ನಾನು ಹೋಗುವುದಿಲ್ಲ. ಇತರ ಸದಸ್ಯರಿಗೂ ಬೇಡ ಎಂದು ಹೇಳುತಿದ್ದೇನೆ. ಅಧ್ಯಯನ ಪ್ರವಾಸದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರ್ಕಾರ ಅನುಮತಿ ನೀಡಿದ ನಂತರ ಕೆಲವರು ಮಾತ್ರ ಪ್ರವಾಸಕ್ಕೆ ತೆರಳಬಹುದು. ತಮಗೆ ವಿದೇಶಿ ಪ್ರವಾಸದ ಅವಕಾಶವಿದೆ. ಆದರೆ, ಈ ಮೊತ್ತವನ್ನು ಸಹ ಹಾಸ್ಟೆಲ್ ನಿರ್ವಹಣೆಗೆ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.