ADVERTISEMENT

ಬರಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 15:00 IST
Last Updated 2 ಅಕ್ಟೋಬರ್ 2011, 15:00 IST

ಚಿತ್ರದುರ್ಗ: ಮುಂಗಾರು ಮಳೆ ವೈಫಲ್ಯದಿಂದ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ ನಷ್ಟ ಸಂಭವಿಸಿದ್ದು, ಸರ್ಕಾರ ತಕ್ಷಣ `ಬರಪೀಡಿತ ಪ್ರದೇಶ~ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಕರ್ನಾಟಕ ಪ್ರಾಂತ ರೈತ ಸಂಘ, ಗ್ರಾಮ ಪಂಚಾಯ್ತಿ ನೌಕರರ ಸಂಘದ ಆಶ್ರಯದಲ್ಲಿ  ಪ್ರತಿಭಟನೆ ನಡೆಯಿತು.

ಯೂನಿಯನ್ ಪಾರ್ಕ್‌ನಿಂದ ಆರಂಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿತು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಜಿ.ಪಂ. ಕಚೇರಿಗೆ ತೆರಳಿ ಸಿಇಒಗೆ ಮನವಿ ಸಲ್ಲಿಸಿದರು.

ಪ್ರತಿ ವರ್ಷವೂ ಜಿಲ್ಲೆ ಬರಗಾಲಕ್ಕೆ ತುತ್ತಾಗುತ್ತಿದೆ. ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಲು ಉದಾಸೀನ ಮಾಡುತ್ತಿದೆ. ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಮತ್ತು ಜನವಿರೋಧಿ ನಿಲುವು ತಾಳಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಟೀಕಿಸಿದರು.

ರೈತರು ಪ್ರತಿ ಎಕರೆಗೆ ಕನಿಷ್ಠ ರೂ.15ರಿಂದ 25 ಸಾವಿರ ನಷ್ಟ ಅನುಭವಿಸಿದ್ದಾರೆ. ಬೆಲೆ ಕುಸಿತದಿಂದ ಸಾಲದ ಕೂಪದಲ್ಲಿ ಸಿಲುಕಿರುವ ರೈತರು ಆತ್ಮಹತ್ಯೆಗೆ ಶರಣಾಗುವ ಸ್ಥಿತಿಗೆ ತಲುಪಿದ್ದಾರೆ. ಕೂಲಿಕಾರ್ಮಿಕರನ್ನು, ಬಡವರನ್ನು ಹಸಿವಿನ ದವಡೆಗೆ ನೂಕಿದೆ. ಜಿಲ್ಲೆಯಾದ್ಯಂತ ಎಪಿಎಂಸಿಗಳಲ್ಲಿ ದುಡಿಯುವ ಸಾವಿರಾರು ಹಮಾಲಿ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗಿದೆ ಎಂದು ವಿವರಿಸಿದರು.

ಉದ್ಯೋಗ ಖಾತ್ರಿ ಯೋಜನೆಯನ್ನು ಮುಂದಿನ ಮಳೆಗಾಲದವರೆಗೂ ಪ್ರತಿ ಗ್ರಾಮಕ್ಕೂ ವಿಸ್ತರಿಸಬೇಕು. ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ಶೇಂಗಾ ಬೆಳೆಗಾರರಿಗೆ ಪ್ರತಿ ಎಕರೆಗೆ ಬಂಡವಾಳ ಹೂಡಿಕೆ ನಷ್ಟ ಪರಿಹಾರ ರೂ. 15 ಸಾವಿರ ನೀಡಬೇಕು. ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಹೊಸ ಸಾಲ ಮಂಜೂರಾತಿಗೆ ಅವಕಾಶ ನೀಡಬೇಕು. ಪ್ರಸ್ತುತ ಸಾಲಿನ ಭೂಕಂದಾಯ, ನೀರಿನ ಕಂದಾಯವನ್ನು  ಮನ್ನಾ ಮಾಡಬೇಕು. ಭಾಗ್ಯಜ್ಯೋತಿ ಕುಟೀರ ಜ್ಯೋತಿ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಚಳ್ಳಕೆರೆ ಮತ್ತು ಹಿರಿಯೂರು ನಗರದಲ್ಲಿ ಎಪಿಎಂಸಿಯಿಂದ ಹಮಾಲಿ ವಸತಿ ಯೋಜನೆಗಾಗಿ ಕಟ್ಟಬೇಕಾದ 27 ಲಕ್ಷ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿಸಿ ವಸತಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.


ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾ ಕಾರ್ಯದರ್ಶಿ ಬಿ. ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಡಿ.ಎಂ. ಮಲಿಯಪ್ಪ, ಟಿ. ನಿಂಗಣ್ಣ, ಟಿ. ತಿಪ್ಪೇಸ್ವಾಮಿ, ಕೆ.ಸಿ. ಹರೀಶ್, ಆರ್. ಲಂಕೇಶ್, ಸನತ್‌ಕುಮಾರ್, ರಾಮಣ್ಣ, ಎಂ.ಎಚ್. ರಮೇಶ್, ಟಿ. ಮಂಜುನಾಥ್, ಎಸ್. ರಾಜಣ್ಣ, ಕೆ.ವಿ. ವೀರಭದ್ರಪ್ಪ, ಕೆ.ಬಿ. ಜಯಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT