ADVERTISEMENT

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಮೋಟಮ್ಮ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ನಾಯಕನಹಟ್ಟಿ: ರಾಜ್ಯದ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕಿ ಮೋಟಮ್ಮ ಬುಧವಾರ ಇಲ್ಲಿ ಆರೋಪಿಸಿದರು.

 ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ, ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗ್ರಾಮಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದರ್ಶನ ಪಡೆಯಲು ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

 ರಾಜ್ಯ ಸರ್ಕಾರ 123 ತಾಲ್ಲೂಕುಗಳನ್ನು ಬರಪೀಡಿತ ಎದು ಘೋಷಣೆ ಮಾಡಿ ಆರು ತಿಂಗಳು ಕಳೆದಿವೆಯಾದರೂ, ಜನರ ಗೋಳು ಕೇಳದೇ ಕೇವಲ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದು ಟೀಕಿಸಿದರು.

 ರಾಜ್ಯದಲ್ಲಿ ಕುಡಿಯುವ ನೀರಿಲ್ಲದೇ ಜನರು ಪರದಾಡುತ್ತಿದ್ದಾರೆ. ಜನ ಜಾನುವಾರುಗಳಿಗೆ ಮೇವಿಲ್ಲ. ಗೋಶಾಲೆಗಳು ನಾಮಕಾವಸ್ಥೆಗೆ ಇವೆ. ಬರಗಾಲ ನಿರ್ವಹಣೆಗೆಂದು ಕೊಳವೆಬಾವಿ ಕೊರೆಸಿದ್ದಾರೆ. ಆದರೆ ಅಲ್ಲಿ ನೀರು ದೊರೆತಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸಚಿವರು ಗಮನ ಇತ್ತ ಗಮನಹರಿಸುತ್ತಿಲ್ಲ ಎಂದು ದೂರಿದರು.

ಖಾಲಿ ಕೊಡ ಪ್ರದರ್ಶನ: ಬರಪೀಡಿತ ಪ್ರದೇಶಗಳನ್ನು ವೀಕ್ಷಿಸಲು ಮೋಟಮ್ಮ ಅವರ ನೇತೃತ್ವದ ತಂಡ ಹಿರೇಹಳ್ಳಿಗೆ ಆಗಮಿಸಿದಾಗ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಕುರಿತು ಗಮನ ಸಳೆದರು. 

ಶಾಸಕ ಗೋಪಾಲಕೃಷ್ಣ ಮಾತನಾಡಿ, ಸುಮಾರು 6 ಕಿ.ಮೀ. ದೂರದಿಂದ ನೀರು ಸರಬರಾಜಿಗೆ ಪೈಪ್‌ಲೈನ್ ಅಳವಡಿಸಲು ನಿರ್ಧರಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ, ಕಾಮಗಾರಿ ತ್ವರಿತವಾಗಿ ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಶಾಸಕರಾದ ನೆ.ಲ. ನರೇಂದ್ರಬಾಬು, ವೆಂಕಟೇಶ್, ಜಿ.ಪಂ. ಉಪಾಧ್ಯಕ್ಷರಾದ ಭಾರತಿ ಕಲ್ಲೇಶ್, ಜಿ.ಪಂ. ಮಾಜಿ ಅಧ್ಯಕ್ಷ ಬಾಲರಾಜ್, ಗೀತಾನಂದಿನಿಗೌಡ ಮತ್ತಿತರರು ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.