ADVERTISEMENT

ಬಿಕೋ ಎನ್ನುತ್ತಿದೆ ಖರೀದಿ ಕೇಂದ್ರ!

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 10:55 IST
Last Updated 14 ಜನವರಿ 2012, 10:55 IST

ಭರಮಸಾಗರ: ಇಲ್ಲಿನ ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಗೊಂಡು ಒಂದು ತಿಂಗಳಾಗುತ್ತಾ ಬಂದರೂ ರೈತರು ಬಾರದೆ ಬಿಕೋ ಎನ್ನುತ್ತಿದೆ.

ಕೇಂದ್ರ ಆರಂಭಿಸುವ ಮುನ್ನಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಈಗಲೂ ಕೂಡ ಬಹಳಷ್ಟು ರೈತರಿಗೆ ಇಲ್ಲಿ ಖರೀದಿ ಕೇಂದ್ರ ಆರಂಭಗೊಂಡಿರುವ ಬಗ್ಗೆಯಾಗಲಿ, ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ಮುಂತಾದ ಸೌಲಭ್ಯಗಳ ಕುರಿತು ಮಾಹಿತಿ ಇಲ್ಲ. ವಿಚಾರಿಸೋಣ ಎಂದರೆ ಯಾವೊಬ್ಬ ಅಧಿಕಾರಿಯೂ ಕೇಂದ್ರದಲ್ಲಿ ಇರುವುದಿಲ್ಲ ಎನ್ನುವ ಆರೋಪ ರೈತರಿಂದ ಕೇಳಿಬರುತ್ತದೆ. ಖರೀದಿ ಕೇಂದ್ರದ ಪ್ರವೇಶ ದ್ವಾರ ಸದಾ ಮುಚ್ಚಿರುವುದು ರೈತರ ಆರೋಪಗಳನ್ನು ಪುಷ್ಟೀಕರಿಸುತ್ತಿದೆ.

ಆದರೆ, ಇದನ್ನು ನಿರಾಕರಿಸುವ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸರ್ಕಾರ 1 ಕ್ವಿಂಟಲ್ ಮೆಕ್ಕಜೋಳಕ್ಕೆ ರೂ980 ಬೆಂಬಲ ಬೆಲೆ, ಕಾಲಿ ಚೀಲಕ್ಕೆ ರೂ7 ನಿಗದಿ ಮಾಡಿದೆ. ಹೊರಗೆ ಮಾರುಕಟ್ಟೆಯಲ್ಲಿ ವರ್ತಕರು ಮೆಕ್ಕಜೋಳಕ್ಕೆ ಕ್ವಿಂಟಾಲಿಗೆ ರೂ1,000ಕ್ಕೂ ಹೆಚ್ಚು ಬೆಲೆ ನೀಡಿ ಖರೀದಿಸುತ್ತಿದ್ದಾರೆ. ಇದರಿಂದ ರೈತರ‌್ಯಾರು ಕೇಂದ್ರಕ್ಕೆ ಬರುತ್ತಿಲ್ಲ ಎನ್ನುತ್ತಾರೆ. ಎಪಿಎಂಸಿಯಿಂದ ಖರೀದಿ ಕೇಂದ್ರಕ್ಕೆ ಅಗತ್ಯವಾದ ತೂಕದ ಯಂತ್ರ, ಗೋದಾಮು ಸೌಲಭ್ಯ, ಪ್ರಚಾರಕ್ಕೆ ಬೇಕಾದ ಬ್ಯಾನರ್, ಬ್ಯಾಲೆಟ್‌ಪೇಪರ್ ಸೇರಿದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದದ್ದು ಕೇಂದ್ರದ ಉಸ್ತುವಾರಿ ನೋಡಿಕೊಳ್ಳುವ ಆಹಾರ ಮತ್ತು ನಿಗಮ ಇಲಾಖೆ ಸಿಬ್ಬಂದಿಗೆ ಸೇರಿದ್ದು. ಅವರು ನಿತ್ಯ ಕೇಂದ್ರದಲ್ಲಿದ್ದು, ರೈತರಿಗೆ ಅಗತ್ಯ ಮಾಹಿತಿ ನೀಡುವುದು, ಖರೀದಿ ವಹಿವಾಟು ನೋಡಿಕೊಳ್ಳಬೇಕು ಎನ್ನುತ್ತಾರೆ ಎಪಿಎಂಸಿ ಮಾರುಕಟ್ಟೆ ಸಹಾಯಕ ಅಧಿಕಾರಿ ಹೊನ್ನಪ್ಪ.

ಪ್ರಸ್ತುತ ಸನ್ನಿವೇಶದಲ್ಲಿ ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಯ ಎಲ್ಲಾ ಕೆಲಸಗಳಿಗೂ ಹೆಚ್ಚು ಹಣ ವ್ಯಯವಾಗುತ್ತದೆ. ಅದರಲ್ಲೂ ಈ ಬಾರಿ ಕೈಕೊಟ್ಟ ಮಳೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದೆ ರೈತರು ಕಂಗಾಲಾಗಿದ್ದಾರೆ. ವಾಸ್ತವ ಹೀಗಿರುವಾಗ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆಯಿಂದ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ. ಕನಿಷ್ಠ ರೂಒಂದೂವರೆ ಸಾವಿರ ಬೆಂಬಲ ಬೆಲೆ ನೀಡಿದ್ದರೆ ರೈತರು ಒಂದಿಷ್ಟು ನೆಮ್ಮದಿ ಕಂಡುಕೊಳ್ಳಬಹುದಿತ್ತು ಎನ್ನುತ್ತಾರೆ ಕೊಳಹಾಳ್ ಗ್ರಾಮದ ರೈತರಾದ ವಿರೂಪಾಕ್ಷ, ಶಿವಕುಮಾರ್, ರುದ್ರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.