ADVERTISEMENT

ಬಿಜೆಪಿ ವಿರೋಧಿ ಅಲೆ ಸೃಷ್ಟಿಯಾಗಬೇಕು

ಸಂವಿಧಾನದ ಉಳಿವಿಗಾಗಿ ಕರ್ನಾಟಕ ಸಂವಾದದಲ್ಲಿ ಶಾಸಕ ಜಿಗ್ನೇಶ್ ಮೇವಾನಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 8:14 IST
Last Updated 7 ಏಪ್ರಿಲ್ 2018, 8:14 IST
ಚಿತ್ರದುರ್ಗದಲ್ಲಿ ಶುಕ್ರವಾರ ನಡೆದ ಸಂವಿಧಾನದ ಉಳಿವಿಗಾಗಿ ಕರ್ನಾಟಕ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಜಿಗ್ನೇಶ್ ಮೇವಾನಿ ಮಾತನಾಡಿದರು
ಚಿತ್ರದುರ್ಗದಲ್ಲಿ ಶುಕ್ರವಾರ ನಡೆದ ಸಂವಿಧಾನದ ಉಳಿವಿಗಾಗಿ ಕರ್ನಾಟಕ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಜಿಗ್ನೇಶ್ ಮೇವಾನಿ ಮಾತನಾಡಿದರು   

ಚಿತ್ರದುರ್ಗ: ದೇಶದ ಸಂವಿಧಾನಕ್ಕೆ ಬಿಜೆಪಿಯಿಂದ ಆಪತ್ತು ಎದುರಾಗಿದೆ. ಆದ್ದರಿಂದ ಈ ಪಕ್ಷದ ವಿರುದ್ಧ ಎದ್ದಿರುವ ವಿರೋಧಿ ಅಲೆ ಆಂದೋಲನವಾಗಿ ರೂಪುಗೊಳ್ಳಬೇಕಾಗಿದೆ ಎಂದು ಗುಜರಾತ್ ವಡಗಾಂ ಶಾಸಕ ಜಿಗ್ನೇಶ್ ಮೇವಾನಿ ತಿಳಿಸಿದರು.ಇಲ್ಲಿನ ಪತ್ರಿಕಾ ಭವನದಲ್ಲಿ ಸಂವಿಧಾನದ ಉಳಿವಿಗಾಗಿ ಕರ್ನಾಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ಸೋಲಿಸುವುದು ನಮ್ಮ ಪ್ರಮುಖ ಅಜೆಂಡಾ. ಯಾವುದೇ ರಾಜಕೀಯ ಪಕ್ಷಕ್ಕೂ ನನ್ನ ಬೆಂಬಲ ಇಲ್ಲ. ನೋಟಾಗೆ ಮತ ಚಲಾಯಿಸಿದರೆ, ಬಿಜೆಪಿ ಸೋಲಿಸಲು ಸಾಧ್ಯವಿಲ್ಲ. ಆದ್ದರಿಂದ ನೋಟಾ ಬದಲಾಗಿ ಯಾವುದಾದರೂ ರಾಜಕೀಯ ಪಕ್ಷಕ್ಕೆ ಮತ ಹಾಕಿ ಎಂದು ಮನವಿ ಮಾಡಿದರು.

ರಾಜಕೀಯ ಕ್ರಿಯಾ ಸಮಿತಿ ಸದಸ್ಯ ನೂರ್ ಶ್ರೀಧರ್ ಮಾತನಾಡಿ, ‘ಸಂವಿಧಾನ ವಿರೋಧಿ, ಮತಾಂಧ, ಕಾರ್ಪೋರೆಟ್ ಶಕ್ತಿಗಳು ಸೇರಿ ದುಷ್ಟಕೂಟ ರಚಿಸಿಕೊಂಡಿವೆ. ಅದು ಇಡೀ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿವೆ. ಇದು ಕೇವಲ ಕೋಮುವಾದಿ ಪ್ರಶ್ನೆ ಅಲ್ಲ. ಇಡೀ ಭಾರತವನ್ನು ನುಂಗುವ ರೀತಿಯಲ್ಲಿ ಕಾರ್ಪೋರೇಟ್‌ ಶಕ್ತಿಗಳು ಒಂದಾಗಿವೆ. ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ’ ಎಂದರು.

ADVERTISEMENT

ಬಿಜೆಪಿ ಮತ್ತು ಸಂಘ ಪರಿವಾರ ಒಂದಾಗಿ ಧರ್ಮ, ಧರ್ಮಗಳ ನಡುವೆ ಜಗಳ ಹಚ್ಚಿ ರಾಜಕಾರಣ ಮಾಡುತ್ತಿವೆ. ಅಲ್ಲದೆ, ಜಾತಿ, ಧರ್ಮ, ವರ್ಗ, ಲಿಂಗ ಎಂಬ ತಾರತಮ್ಯ ಹೋಗಿ ಸಮಾನತೆ ತರಬೇಕು ಎಂಬ ಕಾರಣಕ್ಕೆ ರೂಪುಗೊಂಡಿರುವ ಸಂವಿಧಾನದಲ್ಲಿ ಏನನ್ನು ಬದಲಾವಣೆ ಮಾಡಲು ಬಯಸುತ್ತೀರಾ ಎಂದು ಪ್ರಶ್ನಿಸಿದರು.

ಜಾತ್ಯತೀತ ಮತ್ತು ಸಮಾನತೆ ಎರಡು ಅಂಶಗಳು ಮುಖ್ಯವಾಗಿವೆ. ಇವೆರಡನ್ನೂ ಸಂಘ ಪರಿವಾರದವರು ಮತ್ತು ಕಾರ್ಪೋರೆಟ್ ಶಕ್ತಿಗಳು ದ್ವೇಷಿಸುತ್ತವೆ. ಜನರು ಪರಸ್ಪರ ಹೊಡೆದಾಡಿ ದೇಶದಲ್ಲಿ ಅಂತಃಕಲಹ ಉಂಟಾಗಬೇಕು ಎಂಬುದಾಗಿ ಬಯಸುತ್ತಾರೆ ಎಂದು ಹೇಳಿದರು.

ಕ್ರಿಯಾ ಸಮಿತಿ ಸದಸ್ಯೆ ಬಿ.ಟಿ. ಲಲಿತಾನಾಯ್ಕ್ ಮಾತನಾಡಿ, ‘ದೇಶದಲ್ಲಿ ಉತ್ತಮ ವಾತಾವರಣ ಇಲ್ಲ. ನಾವು ತತ್ವ ಸಿದ್ಧಾಂತಗಳಡಿ ನಡೆದುಕೊಳ್ಳುತ್ತೇವೆ. ಪ್ರಗತಿಪರ ಚಿಂತನೆ ಇರುವ ಪಕ್ಷಗಳ ಜತೆ ಕೈಜೋಡಿಸಿ ಎಂದು ಜಿಗ್ನೇಶ್ ಮೇವಾನಿ ಅವರಲ್ಲಿ ಕೇಳಿಕೊಳ್ಳುತ್ತೇನೆ. ಇದ್ದುದರಲ್ಲಿ ಕಾಂಗ್ರೆಸ್ ಜಾತ್ಯತೀತವಾಗಿ ನಡೆದುಕೊಳ್ಳುತ್ತಿದೆ. ಆದರೆ, ಬಿಜೆಪಿ ಕೋಮುವಾದಿಯಾಗಿ ನಡೆದುಕೊಳ್ಳುತ್ತಿದೆ’ ಎಂದು ತಿಳಿಸಿದರು.

ರಾಜಕೀಯ ಕ್ರಿಯಾ ಸಮಿತಿ ಸದಸ್ಯ ಅನಿಸ್ ಪಾಷಾ, ಜಿಲ್ಲಾ ಸಂಚಾಲಕ ಟಿ. ಶಫಿವುಲ್ಲಾ ಇದ್ದರು.

**

ಬಿಜೆಪಿಯವರು ಅಪಾರ ಮೊತ್ತದ ಹಣ ನೀಡಿ ಸಾಮಾಜಿಕ ಜಾಲತಾಣಗಳನ್ನು ಖರೀದಿ ಮಾಡಿದ್ದಾರೆ – ಜಿಗ್ನೇಶ್ ಮೇವಾನಿ,ಶಾಸಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.