ADVERTISEMENT

ಬಿತ್ತನೆಬೀಜ ಪಡೆಯಲು ಮುಗಿಬಿದ್ದ ರೈತರು

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 5:50 IST
Last Updated 2 ಜೂನ್ 2011, 5:50 IST

ಭರಮಸಾಗರ: ಇಲ್ಲಿನ ಎಪಿಎಂಸಿಯಲ್ಲಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಮೇ 31ರಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆಬೀಜ ವಿತರಣೆ ಆರಂಭಿಸಲಾಗಿದ್ದು ಮಂಗಳವಾರ ಬಿತ್ತನೆಬೀಜ ಪಡೆಯಲು ರೈತರು ವಿತರಣಾ ಕೇಂದ್ರಕ್ಕೆ ಮುಗಿಬಿದ್ದದ್ದು ಕಂಡುಬಂದಿತು.

ಸರ್ಕಾರದಿಂದ ಅಂಗೀಕೃತವಾದ ವಿವಿಧ ಕಂಪೆನಿಗಳ ಮೆಕ್ಕೆಜೋಳ, ಊಟದಜೋಳ, ತೊಗರಿಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಈಚೆಗೆ ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಬಹುತೇಕ ಕಡೆಗಳಲ್ಲಿ ಹೊಲ ಬಿತ್ತನೆಗೆ ಸಜ್ಜುಗೊಳಿಸಲಾಗಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೇಂದ್ರಕ್ಕೆ ಆಗಮಿಸಿ ಸಾಲಿನಲ್ಲಿ ನಿಂತು ಬಿತ್ತನೆಬೀಜ ಪಡೆದರು.

ಮೆಕ್ಕೆಜೋಳ 1 ಕೆ.ಜಿ.ಗೆ ್ಙ 30, ಹೈಬ್ರೀಡ್‌ಜೋಳ 1 ಕೆ.ಜಿ.ಗೆ ್ಙ 23.5, ತೊಗರಿ 1 ಕೆ.ಜಿ.ಗೆ ್ಙ  32.5 ರಿಯಾಯಿತಿ ದರ ನಿಗದಿಯಾಗಿದೆ. ಶಿಫಾರಸು ಪ್ರಮಾಣದಂತೆ ಒಬ್ಬ ರೈತನಿಗೆ ಮೆಕ್ಕೆಜೋಳ ಎಕರೆಗೆ 7ಕೆ.ಜಿ., ಹೈಬ್ರೀಡ್‌ಜೋಳ ಎಕರೆಗೆ 3ಕೆ.ಜಿ., ತೊಗರಿ ಎಕರೆಗೆ 5ಕೆ.ಜಿ.ಯಂತೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಭರಮಸಾಗರ, ಕೊಳಹಾಳ್, ಕೋಗುಂಡೆ, ಇಸಾಮುದ್ರ, ಕಾಲ್ಗೆರೆ ಗ್ರಾ.ಪಂ. ವ್ಯಾಪ್ತಿಯ ರೈತರಿಗೆ ಇಲ್ಲಿನ ಎಪಿಎಂಸಿ ಕೇಂದ್ರದಲ್ಲಿ ಬಿತ್ತನೆಬೀಜ ಮಾರಾಟ ಮಾಡಲಾಗುತ್ತಿದೆ. ಯಳಗೋಡು ಗ್ರಾ.ಪಂ. ವ್ಯಾಪ್ತಿ ರೈತರಿಗೆ ಯಳಗೋಡಿನಲ್ಲಿ, ಸಿರಿಗೆರೆ, ಅಳಗವಾಡಿ, ಚಿಕ್ಕಬೆನ್ನೂರು ಗ್ರಾ.ಪಂ. ವ್ಯಾಪ್ತಿಯ ರೈತರಿಗೆ ಸಿರಿಗೆರೆ ಗ್ರಾ.ಪಂ. ಗೋದಾಮುಗಳಲ್ಲಿ ಬಿತ್ತನೆಬೀಜ ವಿತರಿಸಲಾಗುತ್ತಿದೆ.

ಇನ್ನೂ 30ರಿಂದ 45 ದಿನಗಳ ಕಾಲ ಬೀಜ ವಿತರಿಸಲಾಗುತ್ತದೆ. ಅಗತ್ಯ ಬಿತ್ತನೆಬೀಜಗಳ ದಾಸ್ತಾನು ಇರುವ ಕಾರಣ ಎಲ್ಲಾ ರೈತರಿಗೂ ರಿಯಾಯಿತಿ ದರದಲ್ಲಿ ಬಿತ್ತನೆಬೀಜಗಳು ದೊರಕಲಿವೆ ಎಂದು ಇಲ್ಲಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಡಾ.ಶ್ವೇತಾ ತಿಳಿಸಿದ್ದಾರೆ. ಹೋಬಳಿ ವ್ಯಾಪ್ತಿಯ ವ್ಯವಸಾಯ ಭೂಮಿಯಲ್ಲಿ ಲಘುಪೋಷಕಾಂಶಗಳ ಕೊರತೆ ಇರುವುದರಿಂದ ರೈತರು ತಮ್ಮ ಜಮೀನಿನ ಮಣ್ಣಿನಲ್ಲಿ ಶಿಫಾರಸು ಪ್ರಮಾಣದಂತೆ ಎಕರೆಗೆ 100 ಗ್ರಾಂ ಜಿಪ್ಸಂ, ಎಕರೆಗೆ 5 ಕೆ.ಜಿ. ಜಿಂಕ್ ಸಲ್ಫೇಟ್ ಬಳಸುವಂತೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.