ADVERTISEMENT

ಬುಕ್ಕಾಪಟ್ಟಣ ಅರಣ್ಯದತ್ತ ಆನೆಗಳ ಪಯಣ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 7:12 IST
Last Updated 22 ನವೆಂಬರ್ 2017, 7:12 IST
ಹಿರಿಯೂರು ತಾಲ್ಲೂಕಿನ ಗೌಡನಹಳ್ಳಿ ಭಾಗದಲ್ಲಿ ಕಾಣಿಸಿಕೊಂಡ ಆನೆಗಳು.
ಹಿರಿಯೂರು ತಾಲ್ಲೂಕಿನ ಗೌಡನಹಳ್ಳಿ ಭಾಗದಲ್ಲಿ ಕಾಣಿಸಿಕೊಂಡ ಆನೆಗಳು.   

ಚಿತ್ರದುರ್ಗ: ಐಮಂಗಲ ಸಮೀಪದ ಕಲ್ಲಟ್ಟಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಎರಡು ಆನೆಗಳನ್ನು ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ತುಮಕೂರು ಜಿಲ್ಲೆ ಬುಕ್ಕಾಪಟ್ಟಣ ಅರಣ್ಯದತ್ತ ಓಡಿಸಿದ್ದಾರೆ.

ಕಲ್ಲಟ್ಟಿ ಗ್ರಾಮದ ಹೊಲಗಳಲ್ಲಿ ಕಾಣಿಸಿಕೊಂಡಿದ್ದ ಆನೆಗಳನ್ನು ಸೋಮವಾರ ಸಂಜೆ ವೇಳೆಗೆ ಕೊಳಹಾಳ್ ಕಡೆಗೆ ಓಡಿಸಲಾಯಿತು. ರಾತ್ರಿಯಾದಂತೆ ಆನೆ
ಕಾರ್ಯಾಚರಣೆ ಚುರುಕುಗೊಳಿಸಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಪಟಾಕಿ ಸಿಡಿಸುತ್ತಾ, ತುಮಕೂರು ಜಿಲ್ಲಾ ವ್ಯಾಪ್ತಿಯ ಅರಣ್ಯ ಪ್ರದೇಶದತ್ತ ಆನೆಗಳನ್ನು ಓಡಿಸಲಾರಂ­ಭಿಸಿದರು.

ಸಂಜೆ ಮೇಲೆ ಕಲ್ಲಟ್ಟಿಯಿಂದ ಹೊರಟ ಆನೆಗಳು, ರಾತ್ರಿ ಕೊಳಹಾಳ್ ಗ್ರಾಮದ ವ್ಯಾಪ್ತಿಯಲ್ಲಿ ಸುತ್ತಾಡಿ ಹಿರಿಯೂರಿನತ್ತ ಪ್ರಯಾಣ ಬೆಳೆಸಿವೆ. ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ರಾತ್ರಿ ಹಿರಿಯೂರು ಪಟ್ಟಣವನ್ನು ದಾಟಿಸಿ, ಗೌಡನಹಳ್ಳಿಯತ್ತ ಓಡಿಸಿದ್ದಾರೆ.

ADVERTISEMENT

ಮಂಗಳವಾರ ಗೌಡನಹಳ್ಳಿಯಿಂದ ಪಿಲಾಲಿ, ದಿಂಡಾವರ ದಾಟಿ ತುಮಕೂರು ಜಿಲ್ಲೆಯ ದಸೂಡಿ ಗ್ರಾಮದತ್ತ ಹೊರಟಿವೆ. ರಾತ್ರಿ ಹೊತ್ತಿಗೆ ಬುಕ್ಕಾಪಟ್ಟಣ ಅರಣ್ಯ ವ್ಯಾಪ್ತಿಗೆ ಸೇರಬಹುದು ಎಂದು ನಿರೀಕ್ಷಿಸಲಾಗಿದೆ.

’ಆನೆಗಳನ್ನು ಓಡಿಸುವುದು ಕಷ್ಟವಾಗುತ್ತಿದೆ. ಆದರೆ, ಅವು ಹೇಗೆ ಹೋಗುತ್ತವೆಯೋ ಆ ರೀತಿ ಅವುಗಳನ್ನು ಕಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪುಣ್ಯಕ್ಕೆ ಯಾರಿಗೂ ತೊಂದರೆ ಮಾಡಿಲ್ಲ. ಗೌಡನಹಳ್ಳಿಯಲ್ಲಿ ನೆರಳಿನಲ್ಲಿ ವಿರಮಿಸಿಕೊಳ್ಳುತ್ತಿದ್ದವು. ಬಿಸಿಲು ಇಳಿದ ಮೇಲೆ ಅವುಗಳನ್ನು ಬುಕ್ಕಾಪಟ್ಟಣದ ಕಡೆಗೆ ಓಡಿಸುತ್ತೇವೆ’ ಎಂದು ಆನೆ ಕಾರ್ಯಾಚರಣೆಯಲ್ಲಿರುವ ಹಿರಿಯೂರು ತಾಲ್ಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ನಾಯಕ್ ’ಪ್ರಜಾವಾಣಿ’ಗೆ ತಿಳಿಸಿದರು.

‘ತೊಂದರೆ ಆಗಿಲ್ಲ’
ಕಳೆದ ವರ್ಷ ತುಮಕೂರು ಅರಣ್ಯ ಪ್ರದೇಶದಿಂದ ಆನೆಗಳು ಬಂದಿದ್ದವು. ಈ ವರ್ಷ ಭದ್ರಾ ಅರಣ್ಯ ಕಡೆಯಿಂದ ಬಂದು, ಅದೇ ದಾರಿಯಲ್ಲಿ ಬುಕ್ಕಾಪಟ್ಟಣದ ಕಡೆಗೆ ಹೊರಟಿವೆ. ಯಾವುದೇ ತೊಂದರೆಯಾಗಿಲ್ಲ. ಜನರನ್ನು ನಿರ್ವಹಿಸುವುದು ಕಷ್ಟವಾಯಿತು ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ್ ಪತ್ರಿಕೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.