ADVERTISEMENT

ಬೆಳಕು ಬೀರದ ವಿದ್ಯುತ್ ದೀಪ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 6:45 IST
Last Updated 10 ಜೂನ್ 2011, 6:45 IST

ಹಿರಿಯೂರು: ಹೈಮಾಸ್ಟ್ ವಿದ್ಯುತ್ ದೀಪವೊಂದು ಅಳವಡಿಸಿ ಐದು ವರ್ಷದ ನಂತರವೂ ಬೆಳಕು ಬೀರದೇ, ಹೊಸ ದಾಖಲೆ ಮಾಡುವತ್ತ ಹೆಜ್ಜೆ ಹಾಕುತ್ತಿರುವ ಪ್ರಕರಣವೊಂದು ತಾಲ್ಲೂಕಿನ ರಂಗೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಎಲ್ಲಾ ಭಾಗಗಳಿಗೂ ಬೆಳಕು ನೀಡುವಂತಹ ಹೈಮಾಸ್ಟ್ ದೀಪ ಅಳವಡಿಸಬೇಕೆಂದು ಗ್ರಾಮಸ್ಥರು ಮಾಡಿದ ಒತ್ತಾಯಕ್ಕೆ, ಕಟ್ಟುಬಿದ್ದ ತಾಲ್ಲೂಕು ಆಡಳಿತ ಲೋಕೋಪಯೋಗಿ ಇಲಾಖೆ ಮೂಲಕ ಐದು ವರ್ಷದ ಹಿಂದೆ ಗ್ರಾಮದಲ್ಲಿನ ಬಸ್‌ನಿಲ್ದಾಣದ ಸಮೀಪ ಇರುವ ಮರದ ಕಟ್ಟೆಯ ಮಧ್ಯಭಾಗದಲ್ಲಿ ಹೈಮಾಸ್ಟ್ ವಿದ್ಯುತ್ ಕಂಬ ನಿಲ್ಲಿಸಿ, ದೀಪವನ್ನು ಅಳವಡಿಸಲಾಯಿತು. ಆದರೆ, ದೀಪಗಳು ಇಂದು ಉರಿಯಬಹುದು, ನಾಳೆ ಉರಿಯಬಹುದು ಎಂದು ಗ್ರಾಮಸ್ಥರು ಕಾದಿದ್ದು ಬಿಟ್ಟರೆ ಬೇರೆ ಯಾವುದೇ ಫಲ ಸಿಕ್ಕಿಲ್ಲ.

ಕಂಬವನ್ನು ನಿಲ್ಲಿಸಲು ಅಳವಡಿಸಿರುವ ಬೋಲ್ಟ್ ನಟ್‌ಗಳು ಸಡಿಲಗೊಂಡು ಕಂಬ ಅಲುಗಾಡುತ್ತಿದೆ. ಜೋರಾಗಿ ಗಾಳಿ ಬೀಸಿದರೆ ಕಂಬ ಉರುಳಿ ಬೀಳುವ ಆತಂಕವಿದೆ.

ಇಡೀ ದಿನ ಹತ್ತಾರು ಜನ ಕಂಬ ಇರುವ ಕಟ್ಟೆಯ ಮೇಲೆ ವಿಶ್ರಾಂತಿ ಪಡೆಯುವುದುಂಟು. ಅನಾಹುತ ಸಂಭವಿಸುವ ಮೊದಲು ಕಂಬವನ್ನು ದುರಸ್ತಿಗೊಳಿಸಿ, ದೀಪ ಉರಿಯುವಂತೆ ಮಾಡಬೇಕು.

ಕಾಮಗಾರಿ ಪೂರ್ಣಗೊಳಿಸಲು ಮಂಜೂರಾದ ಅನುದಾನವನ್ನು ಬಳಸಿಕೊಂಡ ಮೇಲೂ ದೀಪ ಹತ್ತಿಸದೆ ಬಿಟ್ಟಿರುವ ಲೋಕೋಪಯೋಗಿ ಇಲಾಖೆ ವಿರುದ್ಧ ಸಂಬಂಧಿಸಿದವರು ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮದ ಮುಖಂಡ ರಾಮಕೃಷ್ಣ ಹೆಗಡೆ ಒತ್ತಾಯ ಮಾಡಿದ್ದಾರೆ.

ತನಿಖೆಗೆ ಆಗ್ರಹ
ತಾಲ್ಲೂಕಿನ ಐಮಂಗಲ ಹೋಬಳಿಯ ಸೊಂಡೆಕೆರೆ ಗ್ರಾಮದಲ್ಲಿ ಸುಮಾರು 48 ಎಕರೆ ಭೂಮಿಯನ್ನು ಅಕ್ರಮವಾಗಿ ನಿವೇಶನ ನಿರ್ಮಿಸಿ ಹಂಚಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಎಸ್.ಟಿ. ಬಾಲರಾಜ್ ಎನ್ನುವವರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ.

ಗ್ರಾಮದ ರಿ.ಸ.ನಂ. 1 ರೆವಿನ್ಯೂ ಜಮೀನು ಮತ್ತು ರಿ.ಸ.ನಂ. 13 ರ ಗ್ರಾಮ ಠಾಣಾ ಜಮೀನಿನಲ್ಲಿ ಒಟ್ಟು 48 ಎಕರೆ ಸರ್ಕಾರಿ ಭೂಮಿ ಇದೆ. ಯಾವುದೇ, ನಿಯಮ ಪಾಲನೆ ಮಾಡದೆ, ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆ.  ರಸ್ತೆ, ನೀರು, ವಿದ್ಯುತ್ ಕಲ್ಪಿಸಿ ಮನೆಗಳನ್ನೂ ನಿರ್ಮಿಸಲಾಗಿದೆ. ಈ ಕುರಿತು ಗ್ರಾ.ಪಂ.ನಲ್ಲಿ ಸಭಾ ನಡವಳಿ ಮಾಡಿರುವ ದಾಖಲೆಗಳಿಲ್ಲ. ಗ್ರಾಮ ಸಭೆ ನಡೆಸಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.