ಮೊಳಕಾಲ್ಮುರು: ಅತ್ಯಂತ ಬರಪೀಡಿತ ತಾಲ್ಲೂಕೆಂದು ಗುರುತಿಸಿಕೊಂಡಿರುವ ಮೊಳಕಾಲ್ಮುರನ್ನು ಭದ್ರಾಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿ ಬುಧವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜನಮುಖಿ ಸೇವಾ ಸಂಘ ಆಶ್ರಯದಲ್ಲಿ ನಡೆದ ಪ್ರತಿಭಟನೆ ಅಂಗವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಕೊಂಡ್ಲಹಳ್ಳಿಯಿಂದ ಅಪಾರ ಪ್ರಮಾಣದ ಬೈಕ್‌ಗಳಲ್ಲಿ ರ‌್ಯಾಲಿ ಮೂಲಕ ಆಗಮಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗಿ ನಂತರ ತಾಲ್ಲೂಕು ಕಚೇರಿ ಆವರಣಕ್ಕೆ ಆಗಮಿಸಿದರು.
ಜಿಲ್ಲಾ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ. ಜಯಣ್ಣ ಮಾತನಾಡಿ, `ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಬಚಾವತ್ `ಎ~ ಸ್ಕೀಂನಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೆ ಮಾತ್ರ ನೀರು ಸಿಗಲಿದೆ. ಬಿಟ್ಟು ಹೋಗಿರುವ ಮೊಳಕಾಲ್ಮುರು ಹಾಗೂ ಹೊಳಲ್ಕೆರೆ ತಾಲ್ಲೂಗಳನ್ನು `ಬಿ~ ಸ್ಕೀಂನಲ್ಲಿ ಸೇರಿಸುವಂತೆ ಎ್ಲ್ಲಲಾ ವರ್ಗದ ಜನರು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದ್ದು, ಸಹಕಾರ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಮೇಲ್ದಂಡೆ ಯೋಜನೆ `ಎ~ ಸ್ಕೀಂನಲ್ಲಿ 23 ಹಾಗೂ `ಬಿ~ ಸ್ಕೀಂನಲ್ಲಿ 77 ಸೇರಿದಂತೆ ಒಟ್ಟು 100 ಟಿಎಂಸಿ ನೀರು ಬಯಲು ಸೀಮೆಗೆ ಹರಿಯಬೇಕಿದೆ. ನೀರು ಹರಿಯುವ ತನಕ ಹೋರಾಟ ಮಾಡಬೇಕಾದ ಪರಿಸ್ಥಿತಿಯಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಹಾಗೂ ಸದಾ ಬರಗಾಲ, ಅಂತರ್ಜಲ ಸಮಸ್ಯೆ ಎದುರಿಸಿ ಜನ ಜಾನುವಾರುಗಳು ಬದುಕುವುದು ಕ್ಲಿಷ್ಟಕರವಾಗಿರುವ ಮೊಳಕಾಲ್ಮುರು ತಾಲ್ಲೂಕಿಗೆ ಭದ್ರಾ ನೀರು ಬಂದಲ್ಲಿ ಮಾತ್ರ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದರು.
ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಮುರುಘರಾಜೇಂದ್ರ ಒಡೆಯರ್ ಮಾತನಾಡಿ, ಈ ಹಿಂದಿನ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕೇವಲ ರೂ 9 ಕೋಟಿ ವೆಚ್ಚದಲ್ಲಿ ಮುಗಿಯುತ್ತಿದ್ದ ಭದ್ರಾ ಯೋಜನೆ ವೆಚ್ಚ ಅಗಾಧಕ್ಕೆ ಏರಿದೆ. ಇನ್ನಾದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ಮುಂದುವರಿಸದೇ ತಮ್ಮ ಪಾಲಿನ ಶ್ರಮ ಹಾಕಬೇಕು ಎಂದು ಮನವಿ ಮಾಡಿದರು.
ಬಂಡಾಯ ಸಾಹಿತ್ಯ ವೇದಿಕೆ ಸಂಚಾಲಕ ಕೆ.ಜಿ. ವೆಂಕಟೇಶ್, ಗಡಿ ಪ್ರಾಧಿಕಾರ ಸಮಿತಿ ಸದಸ್ಯ ಕೆ.ಜಿ. ಪಾರ್ಥಸಾರಥಿ ಜೆಡಿಎಸ್ ಮುಖಂಡ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಮಾತನಾಡಿದರು.
ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಸರ್ಕಾರಕ್ಕೆ ತಾಲ್ಲೂಕು ಆಡಳಿತ ಮೂಲಕ ಮನವಿ ಸಲ್ಲಿಸಲಾಯಿತು.
ಸಿದ್ದಯ್ಯನಕೋಟೆ ಶಾಖಾಮಠದ ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಜನಮುಖಿ ಸೇವಾ ಸಂಘದ ಜಿಲ್ಲಾಧ್ಯಕ್ಷ ಡಿ.ಒ. ಮೊರಾರ್ಜಿ, ತಾಲ್ಲೂಕು ಅಧ್ಯಕ್ಷ ಬಿ.ಎಸ್. ಮುರಳೀಕೃಷ್ಣ, ಎಚ್.ಸಿ. ಪ್ರದೀಪ್, ಜಿ.ಪಂ. ಸದಸ್ಯೆ ಮಾರಕ್ಕ ಓಬಯ್ಯ, ಕಿಸಾನ್ ಸಂಘದ ಡಾ.ಮಂಜುಳಾ ಸ್ವಾಮಿ, ವೈ.ಡಿ. ಬಸವರಾಜ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.