ADVERTISEMENT

ಭ್ರಷ್ಟಾಚಾರದಲ್ಲೇ ಮುಳುಗಿದ ಬಿಜೆಪಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 4:35 IST
Last Updated 4 ಅಕ್ಟೋಬರ್ 2012, 4:35 IST

ಚಿತ್ರದುರ್ಗ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಿಂದ ಇದುವರೆಗೂ ಹಣ ಲೂಟಿ ಮಾಡುವ ಯೋಜನೆ ಮಾತ್ರ ಜಾರಿಯಾಗಿದ್ದು, ಬಡವರಿಗೆ ಮತ್ತು ರೈತರಿಗೆ ಪ್ರಯೋಜನ ಆಗುವಂತಹ ಕಾರ್ಯಕ್ರಮ ರೂಪಿಸಿಲ್ಲ ಎಂದು ಮಾಜಿ ಸಂಸತ್ ಸದಸ್ಯ ಹನುಮಂತಪ್ಪ ದೂರಿದರು.

ತಾಲ್ಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಮಂಗಳವಾರ ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ `ಕಾಂಗ್ರೆಸ್‌ನೊಂದಿಗೆ ಬನ್ನಿ ಬದಲಾವಣೆ ತನ್ನಿ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಯವರೆಲ್ಲ ವಾಜಪೇಯಿ, ಎಲ್.ಕೆ. ಆಡ್ವಾಣಿಯಾಗಲು ಸಾಧ್ಯವಿಲ್ಲ. ಅದೇ ರೀತಿ ಕಾಂಗ್ರೆಸ್‌ನಲ್ಲಿರುವವರೆಲ್ಲ ಗಾಂಧಿ, ನೆಹರು. ಲಾಲ್ ಬಹಾದ್ದೂರ್ ಶಾಸ್ತ್ರಿಯಾಗಲು ಸಾಧ್ಯವಿಲ್ಲ. ಇರುವವರಲ್ಲೇ ಉತ್ತಮ ಪ್ರತಿನಿಧಿ ಚುನಾಯಿಸುವ ಕೆಲಸ ಮತದಾರರು ಮಾಡಬೇಕಿದೆ ಎಂದರು.

ಕಾಂಗ್ರೆಸ್ ಸೇರಿದಂತೆ ರಾಜ್ಯವನ್ನಾಳಿದ ಇತರ ಯಾವುದೇ ಪಕ್ಷದ ಮುಖ್ಯಮಂತ್ರಿ ಇದುವರೆಗೂ ಜೈಲಿಗೆ ಹೋಗಿಲ್ಲ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಒಬ್ಬರು ಜೈಲಿಗೆ ಹೋಗಿ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಈ ಸರ್ಕಾರದ 11 ಸಚಿವರು ಜೈಲಿಗೆ ಹೋಗಿದ್ದಾರೆ. ಕೆಲವರು `ಬೇಲ್‌ಗಾಗಿ ಡೀಲ್~ ಮಾಡುವ ಮೂಲಕ ನ್ಯಾಯಾಧೀಶರಿಗೆ ್ಙ 10 ಕೋಟಿಗಿಂತಲೂ ಹೆಚ್ಚು ಹಣ ನೀಡಲು ಮುಂದಾಗಿ ಇದುವರೆಗೂ ಹೊರ ಬರದೆ ಪರದಾಡುತ್ತಿದ್ದಾರೆ. ಬಹುಬೇಗ ಶ್ರೀಮಂತರಾಗುವ ಆಸೆಯಿಂದ ಗಣಿಗಾರಿಕೆ ನಡೆಸಿ ಹಣ ಲೂಟಿ ಮಾಡಿದ್ದಾರೆ. ಸಂಪತ್ತನ್ನು ಉಳಿಸಬೇಕಾದವರೇ ಲೂಟಿ ಕಾರ್ಯದಲ್ಲಿ ತೊಡಗಿರುವುದು ವಿಪರ್ಯಾಸ ಎಂದು ನುಡಿದರು.

ಮಾಜಿ ಶಾಸಕ ಎಚ್. ಆಂಜನೇಯ ಮಾತನಾಡಿ, ಭ್ರಷ್ಟಚಾರ ಏಡ್ಸ್ ರೋಗದಂತೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿದೆ. ಇದಕ್ಕೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೇ ನೇರ ಹೊಣೆ. ಕೋಮು ಸೌಹಾರ್ದತೆ  ಹಾಳು ಮಾಡಿದ ಸಂಘಟನೆ ಸಮರ್ಥಿಸಿಕೊಳ್ಳುವ ಮಂದಿ ಅಧಿಕಾರಕ್ಕೆ ತರಬಾರದು ಎಂದು ಕೋರಿದರು.
ಕಾಂಗ್ರೆಸ್ ಮುಖಂಡ ಮೆಹಬೂಬ್ ಪಾಷಾ ಮಾತನಾಡಿ, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಕಾರಣ ಎಂದು ಆರೋಪಿಸಿದರು.

 ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸೇತುರಾಂ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಜಿ.ಎಸ್. ಮಂಜುನಾಥ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಗೀತಾನಂದಿನಿ ಗೌಡ, ಜಿ.ಪಂ. ಉಪಾಧ್ಯಕ್ಷೆ ಭಾರತಿ ಕಲ್ಲೇಶ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್ ಹಾಜರಿದ್ದರು.
ಪ್ರಸಾದ್ ಪಾರ್ಥಿಸಿದರು. ಗ್ರಾ.ಪಂ. ಸದಸ್ಯ ಭೀಮರಾಜ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.