ADVERTISEMENT

ಮತದಾರರ ಜಾಗೃತಿಗೆ `ಸ್ವೀಪ್' ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 8:34 IST
Last Updated 1 ಏಪ್ರಿಲ್ 2013, 8:34 IST

ಚಿತ್ರದುರ್ಗ: ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ವ್ಯವಸ್ಥಿತ ಮತದಾರರ ನೋಂದಣಿ ಶಿಕ್ಷಣ ಮತ್ತು ಮತದಾನದಲ್ಲಿ ಭಾಗವಹಿಸುವಿಕೆ (`ಸ್ವೀಪ್') ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ `ಸ್ವೀಪ್' ಸಮಿತಿ ಅಧ್ಯಕ್ಷ ಕೆ.ಎಂ. ನಾರಾಯಣಸ್ವಾಮಿ ತಿಳಿಸಿದರು. 

ಶನಿವಾರ ಜಿ.ಪಂ. ಕಚೇರಿಯಲ್ಲಿ ನಡೆದ `ಸ್ವೀಪ್' ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಸೇರ್ಪಡೆಯಾಗಬೇಕು ಮತ್ತು ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಬೇಕು. ಅದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಇಲಾಖೆಗಳ ಮೂಲಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

2008ರಲ್ಲಿ ನಡೆದ ಚುನಾವಣೆಯಲ್ಲಿ ಚಲಾಯಿಸಿದ ಮತದಾನಕ್ಕಿಂತ ಹೆಚ್ಚು 2013ರ ಚುನಾವಣೆಯಲ್ಲಿ ಮತದಾನ ಆಗಬೇಕು. ಸಂವಿಧಾನದತ್ತವಾಗಿ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕನ್ನು ನೀಡಲಾಗಿದೆ. ಎಲ್ಲರೂ ಮತ ಚಲಾಯಿಸುವ ಮೂಲಕ ತಮಗೆ ನೀಡಿದ ಹಕ್ಕನ್ನು ಚಲಾಯಿಸಿ, ಕರ್ತವ್ಯ ನಿಭಾಹಿಸಲು ಜಾಗೃತಿ ಮೂಡಿಸಿ ಚುನಾವಣೆ ಯಶಸ್ವಿ ಮಾಡುವುದೇ `ಸ್ವೀಪ್' ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ವಾರ್ತಾ ಇಲಾಖೆಯಿಂದ ಚಲನಚಿತ್ರ ಪ್ರದರ್ಶನ, ಸಂಗೀತ, ನಾಟಕದ ಮೂಲಕ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಮತದಾನ ಮಾಡುವ ಬಗ್ಗೆ ವಿಚಾರ ಸಂಕಿರಣ ಮತ್ತು ತಾಲ್ಲೂಕು ಹಾಗೂ ಹೋಬಳಿಮಟ್ಟದಲ್ಲಿ ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ವಿಜ್, ಭಾಷಣ ಸ್ಪರ್ಧೆಗಳು, ಕವಿಗೋಷ್ಠಿ, ಶಾಲೆಯಲ್ಲಿ ನಡೆಯುವ ಸಮುದಾಯದತ್ತ ಶಾಲಾ ಕಾರ್ಯಕ್ರಮಗಳಲ್ಲಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ವಿವರಿಸಿದರು.

ಯುವಕ, ಯುವತಿ ಮಂಡಳಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು,ಸ್ವಸಹಾಯ ಗುಂಪುಗಳು, ಸ್ತ್ರೀಶಕ್ತಿ ಸಂಘಗಳ ಮೂಲಕ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಾದ್ಯಂತ `ಸ್ವೀಪ್' ಅಡಿ ಮತದಾನ ಜಾಗೃತಿಗಾಗಿ ಮೇ 5ರವರೆಗೆ ಪ್ರತಿ ನಿತ್ಯ ಒಂದಿಲ್ಲೊಂದು ಕಾರ್ಯಕ್ರಮವನ್ನು ಆಯೋಜಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಮತ್ತು ಸ್ವೀಪ್ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದಲೂ ಸಹಕಾರ ಪಡೆಯಲಾಗುತ್ತದೆ ಎಂದರು.

ಪೌರಾಯುಕ್ತ ಕೂರ್ಮರಾವ್, ಜಿಲ್ಲಾ ವಾರ್ತಾಧಿಕಾರಿ ಎಸ್. ಮಹೇಶ್ವರಯ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್. ಕೃಷ್ಣಮೂರ್ತಿ, ತೋಟಗಾರಿಕೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹಾಲಿಂಗಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಂಜೇಗೌಡ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಜಿ. ಶಿವಣ್ಣ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಇಂದಿರಾದೇವಿ, ನೆಹರು ಯುವ ಕೇಂದ್ರದ ಕುಮುದಾನಾಯಕ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಜಿ. ಜಗದೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.