ADVERTISEMENT

ಮಲೇರಿಯಾ ಸಂಪೂರ್ಣ ನಿರ್ಮೂಲನೆಗೆ ಸಜ್ಜಾಗಿ

ವಿಶ್ವ ಮಲೇರಿಯಾ ದಿನದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ವಿ. ನೀರಜ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 10:03 IST
Last Updated 26 ಏಪ್ರಿಲ್ 2018, 10:03 IST
ಚಿತ್ರದುರ್ಗದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ‘ವಿಶ್ವ ಮಲೇರಿಯ ದಿನಾಚರಣೆ’ಯನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಬಿ.ವಿ.ನೀರಜ್ ಉದ್ಘಾಟಿಸಿದರು.
ಚಿತ್ರದುರ್ಗದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ‘ವಿಶ್ವ ಮಲೇರಿಯ ದಿನಾಚರಣೆ’ಯನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಬಿ.ವಿ.ನೀರಜ್ ಉದ್ಘಾಟಿಸಿದರು.   

ಚಿತ್ರದುರ್ಗ: ‘2030ಕ್ಕೆ ಭಾರತ ಮಲೇರಿಯಾಮುಕ್ತ ದೇಶವಾಗಬೇಕು’ ಎಂಬ ಗುರಿಯೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಬಿ.ವಿ.ನೀರಜ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ವಿಭಾಗದ ಸಹಯೋಗದೊಂದಿಗೆ ಬುಧವಾರ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವ ಮಲೇರಿಯಾ’ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಲೇರಿಯಾ ನಿವಾರಿಸಲು ಸಿದ್ಧರಾಗಿ’ ಎಂಬುದು ಈ ವರ್ಷದ ಘೋಷವಾಕ್ಯ. 2025ರ ವೇಳೆಗೆ ಕರ್ನಾಟಕದಲ್ಲಿ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನೀಡಿರುವ ಸೂಚನೆಯೊಂದಿಗೆ ಸಿಬ್ಬಂದಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ಐದಾರು ವರ್ಷಗಳ ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಕಡಿಮೆಯಾಗಿವೆ. ಆದರೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಬೇಕು. ರೋಗ ಬಾರದಂತೆ ತಡೆಯುವುದು ಕೂಡ ಈ ಅಭಿಯಾನದ ಉದ್ದೇಶ’ ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ.ಜಯಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ‘ವಿಶ್ವದಲ್ಲಿ ಸೊಳ್ಳೆ ಕಡಿತದಿಂದ ಹರಡುವ ರೋಗಗಳಿಂದಲೇ ಹೆಚ್ಚು ಸಾವು ಸಂಭವಿಸಿವೆ. ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ, ಕರ್ನಾಟಕದಲ್ಲಿ ಮಲೇರಿಯಾಾ ಪ್ರಕರಣಗಳು ಕಡಿಮೆಯಾಗಿವೆ’ ಎಂದು ವಿವರಿಸಿದರು.

‘ಪಕ್ಕದ ರಾಜ್ಯ ಅಥವಾ ಜಿಲ್ಲೆಗಳಿಂದ ವಲಸೆ ಬರುವ ಕಾರ್ಮಿಕರಿಂದ ನಮ್ಮ ಜಿಲ್ಲೆಗೆ ಮಲೇರಿಯಾ ಹರಡುತ್ತಿದೆ. ರೋಗದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಜ್ವರ ಪ್ರಕರಣಗಳ ಸಮೀಕ್ಷೆ ಮಾಡಬೇಕು. ಜನರಿಗೆ ಆರೋಗ್ಯ
ಶಿಕ್ಷಣ ನೀಡಬೇಕು’ ಎಂದು ಸಲಹೆ ನೀಡಿದರು.

‘ಶಂಕಿತ ರೋಗಿಗಳಿಂದ ಗುಣಾತ್ಮಕ ರಕ್ತ ಸಂಗ್ರಹಣೆ, ಜ್ವರ ಪ್ರಕರಣಗಳನ್ನು ತುರ್ತಾಗಿ ಪರೀಕ್ಷೆಗೆ ಒಳಪಡಿಸಬೇಕು. ರೋಗ ಖಚಿತವಾದರೆ ಚಿಕಿತ್ಸೆ ನೀಡಬೇಕು’ ಎಂದು ಸೂಚಿಸಿದರು. ಕಳೆದ ವರ್ಷ 4,07,069 ರಕ್ತ ಮಾದರಿ ಸಂಗ್ರಹಿಸಿದ್ದು, 17 ಮಲೇರಿಯಾ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.

ಜಿಲ್ಲೆಯ ಮಲೇರಿಯಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಸುಧಾ, ಡಾ. ಕುಮಾರಸ್ವಾಮಿ, ಡಾ. ರೇಣುಕಾ ಪ್ರಸಾದ್, ಜಿಲ್ಲಾ ಕೀಟ ಶಾಸ್ತ್ರಜ್ಞರಾದ ನಂದಿನಿ ಕಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಫಾಲಾಕ್ಷ, ಜಿಲ್ಲಾ ಆರೋಗ್ಯ ಶಿಕ್ಷಾಣಾಧಿಕಾರಿ ಎನ್.ಎಸ್. ಮಂಜುನಾಥ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಖಾಸಿಂ ಸಾಬ್ ಅವರೂ ಇದ್ದರು.

ಪ್ರತಿ ವರ್ಷ ಏ. 25ರಂದು ವಿಶ್ವದಾದ್ಯಂತ ‘ವಿಶ್ವ ಮಲೇರಿಯಾ’ ದಿನ ಆಚರಿಸಲಾಗುತ್ತಿದೆ. 2007ರ ಮೇ ನಲ್ಲಿ ನಡೆದ ವಿಶ್ವಸಂಸ್ಥೆಯ 60ನೇ ವಾರ್ಷಿಕ ಸಮ್ಮೇಳನದಲ್ಲಿ ಏ. 25ರಂದು ‘ವಿಶ್ವ ಮಲೇರಿಯಾ’ ದಿನವನ್ನು ಆಚರಿಸಬೇಕು ಎಂದು ನಿರ್ಧರಿಸಲಾಯಿತು.

ಈ ದಿನದಂದು ಮಲೇರಿಯ ರೋಗದಿಂದಾಗುವ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಚರ್ಚಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 2010ರಲ್ಲಿ 44,319 ಮಲೇರಿ ಪ್ರಕರಣಗಳು ದಾಖಲಾಗಿದ್ದವು. 2018ರ ವೇಳೆಗೆ ಪ್ರಕರಣಗಳ ಸಂಖ್ಯೆ 941ಕ್ಕೆ ಇಳಿದಿದೆ. ಹತ್ತು ವರ್ಷಗಳ ಹಿಂದೆ ಮಲೇರಿಯಾ ಸಾವಿನ ಪ್ರಕರಣಗಳು ದಾಖಲಾಗಿದ್ದವು. ಈಗ ಸಾವಿನ ಪ್ರಕರಣ ಶೂನ್ಯಕ್ಕಿಳಿದಿದೆ. ಅಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಮಲೇರಿಯಾ ತಡೆಗಟ್ಟಲು ಸಾಧ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್. ಎನ್. ಮಂಜುನಾಥ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.