ADVERTISEMENT

ಮಳೆಗಾಗಿ ಮಹಾಪರ್ಜನ್ಯ ಹೋಮ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 4:45 IST
Last Updated 16 ಜುಲೈ 2012, 4:45 IST

ನಾಯಕನಹಟ್ಟಿ: ಇಲ್ಲಿನ ಈಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಳೆಗಾಗಿ ಗ್ರಾಮಸ್ಥರು ಶುಕ್ರವಾರದಿಂದ ಕೈಗೊಂಡಿದ್ದ ಮಹಾ ಪರ್ಜನ್ಯ ಹೋಮವನ್ನು ಭಾನುವಾರ ಜಗಳೂರು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ, ಮುಸ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿ ಭಾನುವಾರ ಪೂರ್ಣಾಹುತಿ ನಡೆಸುವ ಮೂಲಕ ಮುಕ್ತಾಯಗೊಳಿಸಿದರು.

ವರುಣನ ಕೃಪೆಗಾಗಿ ನಾಯಕನಹಟ್ಟಿ ದೇವಸ್ಥಾನ ಹಾಗೂ ಇತರ ಗ್ರಾಮಸ್ಥರು ಶುಕ್ರವಾರ 101 ಪೂರ್ಣ ಕುಂಭಮೇಳ ನಡೆಸುವ ಮೂಲಕ ಮಹಾಪರ್ಜನ್ಯ ಹೋಮಕ್ಕೆ ಚಾಲನೆ ನೀಡಿದ್ದರು. ಶುಕ್ರವಾರ ರಾತ್ರಿಯಿಂದ ಮೂರು ದಿನಗಳ ಕಾಲ ಆಚಮನ ಸಂಕಲ್ಪ, ಗಂಗಾದೇವತಾ ಪೂಜೆ, ಮಹಾಗಣಪತಿ ಪೂಜೆ, ನಂದ್ಯಾದಿ ಚರ್ತುವಿಶಾಂತಿ ಮೊದಲಾದ ಪೂಜಾ ವಿದಿ-ವಿಧಾನಗಳು ನೆರವೇರಿದವು. ಭಾನುವಾರ ಬೆಳಿಗ್ಗೆ ಮಹಾ ಪರ್ಜನ್ಯ ಹೋಮ ಜರುಗಿತು.

ನಂತರ ನಡೆದ ಸಮಾರಂಭದಲ್ಲಿ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶಿರ್ವಚನ ನೀಡಿ, ಮನುಷ್ಯ ಇಂದು ಹಣದ ವ್ಯಾಮೋಹಕ್ಕೆ ಬಿದ್ದು, ಪುಣ್ಯದ ಕೆಲಸ ಮರೆತಿದ್ದಾನೆ. ದಾನ, ಧರ್ಮ ನಿಂತು ಹೋಗಿವೆ ಎಂದು ವಿಷಾದಿಸಿದರು.

ಪ್ರತಿಯೊಬ್ಬರೂ ದುಡಿದ ಕೆಲವು ಭಾಗವನ್ನು ದಾನ ಧರ್ಮಕ್ಕೆ ಮೀಸಲಿಡಬೇಕು ಎಂದು ಹೇಳಿದರು.
ಮುಸ್ಟೂರಿನ ಓಂಕಾರ ಹುಚ್ಚನಾಗಲಿಂಗ ಸ್ವಾಮಿ ದಾಸೋಹ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿ ಮಾತನಾಡಿ, ಇಂದು ಮಾನವ ಪ್ರಕೃತಿ ಕಡೆಗಣಿಸಿದ್ದಾನೆ. ಅವನ ದೃಷ್ಟಿಯಲ್ಲಿ ಬರೀ ಹಣವಿದೆ. ಬರೀ ಹಣದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ರಾಜ್ಯಾದ್ಯಂತ ಎರಡು ವರ್ಷಗಳಿಂದ ಭೀಕರ ಬರಗಾಲ ಆವರಿಸಿದೆ.
 
ಇದಕ್ಕೆ ಕಾರಣ ಏನು ಎಂಬುದನ್ನು ಒಂದು ಕ್ಷಣ ಆಲೋಚಿಸಬೇಕು. ಪ್ರಕೃತಿ ನಾಶ ಇದಕ್ಕೆ ಕಾರಣ. ಇಂದು ಗಿಡ, ಮರಗಳ ಅವನತಿಯಾಗುತ್ತಾ ಬಂದಿದೆ. ಇದನ್ನು ಯೋಚಿಸಿ ಪ್ರಕೃತಿ ಕಾಪಾಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಮುಖಂಡ ನೇರಲಗುಂಟೆ ತಿಪ್ಪೇಸ್ವಾಮಿ, ಕೆಪಿಸಿಸಿ ಸದಸ್ಯ ಬಾಲರಾಜ್ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ್, ತಿಪ್ಪೇರುದ್ರಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಮಹಿಳೆಯರು ಭಾಗವಹಿಸಿದ್ದರು. ವೀರೇಶ್ ಹಿರೇಮಠ ಮತ್ತು ಸಂಗಡಿಗರು ಹೋಮ ಕಾರ್ಯಕ್ರಮ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.