ADVERTISEMENT

ಮಳೆಯಲ್ಲಿ ಬದುಕು ಕೊಚ್ಚಿ ಹೋಯ್ತು ಸ್ವಾಮಿ!

ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಸಂತ್ರಸ್ತರ ಗೋಳು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 8:42 IST
Last Updated 16 ಸೆಪ್ಟೆಂಬರ್ 2013, 8:42 IST

ಹಿರಿಯೂರು: ಈಚೆಗೆ ಸುರಿದ ಮಳೆಯಿಂದ ಹಾನಿಗೊಳಗಾಗಿದ್ದ ಹಿರಿಯೂರಿನ ಆಶ್ರಯ ಕಾಲೊನಿ, ವಾಗ್ದೇವಿ ಶಾಲೆಯ ರಸೆ್ತ ಪ್ರದೇಶಕ್ಕೆ ಹಾಗೂ ಲಕ್ಷ್ಮಮ್ಮ ಕಲ್ಯಾಣಮಂಟಪದಲ್ಲಿ ಸಂತ್ರಸ್ತರಿಗೆ ವ್ಯವಸ್ಥೆ ಮಾಡಿದ್ದ ಗಂಜಿ ಕೇಂದ್ರಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಶಾಸಕ ಡಿ.ಸುಧಾಕರ್ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಮಧ್ಯರಾತ್ರಿಯಲ್ಲಿ ಮಂಪರು ನಿದ್ದೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ರಭಸದಿಂದ ಸುರಿಯುವ ಮಳೆ ಶಬ್ದ ಕೇಳಿ ಬಾಗಿಲು ತೆರೆದು ಹೊರಗೆ ಬರೋಣ ಎನ್ನುವಷ್ಟರಲ್ಲಿ ಮನೆಯೊಳಗೆ ನೀರು ನುಗ್ಗತೊಡಗಿತು. ಪಾತೆ್ರ, ಬಟ್ಟೆಬರೆ, ದವಸಧಾನ್ಯ, ಮಕ್ಕಳ ಪುಸ್ತಕಗಳು ಎಲ್ಲವೂ ನೀರಿನಲ್ಲಿ ತೇಲುತ್ತಿರುವಾಗ ಯಾವುದನ್ನು ತಡೆಯುವುದು, ಯಾವುದನ್ನು ಬಿಡುವುದು ಎಂಬ ಗೊಂದಲದಲ್ಲಿರುವಾಗಲೇ ಮೊಣಕಾಲುದ್ದದ ನೀರು ಮನೆಯ ಒಳಗೆ ನುಗ್ಗತೊಡಗಿತು. ನುಗ್ಗುತ್ತಿದ್ದ ನೀರಿನಲ್ಲಿ ನಮ್ಮ ಬದುಕೂ ಕೊಚ್ಚಿ ಹೋಯಿತು’ ಎಂದು ಆಶ್ರಯ ಕಾಲೊನಿಗೆ ಭೇಟಿ ನೀಡಿದ್ದ ಸಚಿವ ಆಂಜನೇಯ ಅವರಿಗೆ ನಾಗರಿಕರು ತಮ್ಮ ನೋವು ಹೇಳಿಕೊಂಡರು.

ಹರಿಶ್ಚಂದ್ರಘಾಟ್, ಆಶ್ರಯ ಕಾಲೊನಿ ಮೇಲ್ಭಾಗದ ಹೊಲಗಳಲ್ಲಿ ಬಿದ್ದ ಮಳೆಯ ನೀರು ಇಲ್ಲಿಯೇ ಬರಬೇಕು. ಹೀಗಾಗಿ ಮಳೆಯಿಂದ ತುಂಬಾ ಹಾನಿಯಾಗಿದೆ. ಮನೆಗೆ ಹಾಕಿದ್ದ ಬುನಾದಿ ಕಿತ್ತು ಹೋಗಿದ್ದು, ಮನೆಗಳು ಯಾವ ಕ್ಷಣದಲ್ಲಾದರೂ ಬೀಳಬಹುದು ಎನ್ನುವಂತಿದೆ. ಜಿಲ್ಲಾಡಳಿತದಿಂದ ಮನೆಗಳನ್ನು ದುರಸ್ಥಿ ಮಾಡಿಸಿಕೊಡಬೇಕು. ಗಂಜಿಕೇಂದ್ರ ಸ್ಥಗಿತಗೊಂಡರೆ ಮತ್ತೆ ಊಟಕ್ಕೆ ತೊಂದರೆಯಾಗುತ್ತದೆ. ಪಡಿತರ ವ್ಯವಸೆ್ಥ ಮಾಡಿಸಬೇಕು. ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸೆ್ಥ ಮಾಡಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.

ಬಡಾವಣೆಯಲ್ಲಿ ಸುಮಾರು 400 ಮನೆಗಳಿದ್ದು ಶೇ 90ರಷ್ಟು ಬಾಡಿಗೆದಾರರಿದ್ದಾರೆ. ಮನೆಯ ಮಾಲೀಕರು ಬೇರೆ ಕಡೆ ವಾಸವಾಗಿದ್ದಾರೆ. ಹೀಗಾಗಿ ನಮ್ಮ ಗೋಳು ಕೇಳುವವರಿಲ್ಲ. ಮನೆಯಲ್ಲಿದ್ದ ಬಡವರಿಗೆ ಶಾಶ್ವತ ಸೂರು ಕಲ್ಪಿಸಬೇಕು ಎಂದು ಮಹಿಳೆಯರು ಆಗ್ರಹಿಸಿದರು.

ಮಕ್ಕಳ ಪುಸ್ತಕಗಳು ನೆನೆದು ಹಾಳಾಗಿದ್ದರೆ ಅಂತಹವರಿಗೆ ನೋಟ್‌ಬುಕ್‌ ಕೊಡಿಸುತ್ತೇನೆ. ಸರ್ಕಾರದಿಂದ ಸಾಧ್ಯವಾದ ಎಲ್ಲ ನೆರವು ಕೊಡಿಸಲಾಗುವುದು ಎಂದು ಶಾಸಕ
ಡಿ.ಸುಧಾಕರ್ ಭರವಸೆ ನೀಡಿದರು.

ಬಡಾವಣೆಯಲ್ಲಿ ಪ್ರಸ್ತುತ ವಾಸಿಸುತ್ತಿರುವವರ ಪಟ್ಟಿ ತಯಾರಿಸಿ, ಮೇಲ್ಭಾಗದಿಂದ ಹರಿಯುವ ನೀರನ್ನು ತಡೆಯಲು ದೊಡ್ಡ ಕಾಲುವೆ ನಿರ್ಮಿಸಬೇಕು. ಇಡೀ ನಗರಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಪ್ಲಾನ್‌ ತಯಾರಿಸಿ, ಭವಿಷ್ಯದಲ್ಲಿ ಇಂತಹ ಅನಾಹುತಗಳು ಆಗದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಆಂಜನೇಯ ಭರವಸೆ ನೀಡಿದರು.

ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ರವಿಕುಮಾರ್, ಎಂ.ಎ.ಸೇತೂರಾಂ, ಜಿ.ಎಸ್.ಮಂಜುನಾಥ್, ಕರಿಯಮ್ಮ ಶಿವಣ್ಣ, ದ್ಯಾಮಣ್ಣ, ಬ್ಲಾಕ್‌ಕಾಂಗೆ್ರಸ್ ಅಧ್ಯಕ್ಷ ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ
ಎನ್.ತಿಪ್ಪೇಸ್ವಾಮಿ, ತಹಶೀಲ್ದಾರ್ ಶ್ರೀಕಂಠಮೂರ್ತಿ, ಮಲ್ಲಿಕಾರ್ಜುನ್, ಮುಖ್ಯಾಧಿಕಾರಿ ಜಯಣ್ಣ, ಮುಕ್ಕಣ್ಣ ನಾಯಕ, ಡಿವೈಎಸ್ಪಿ ಡಾ.ಶೇಖರ್‌, ಸುರೇಶ್ ಬಾಬು, ಜಿ.ಪ್ರೇಮ್ ಕುಮಾರ್, ಪುರುಷೋತ್ತಮ್, ಅಜ್ಜಣ್ಣ, ತಿಪ್ಪೀರಣ್ಣ, ಅಶೋಕ್‌, ಯೋಗಾನಂದ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.