ಚಿತ್ರದುರ್ಗ: ಲೋಕಸಭಾ ಚುನಾವಣೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ, ಜಿಲ್ಲಾ ಪಂಚಾ ಸಿಇಒ ಎನ್.ಮಂಜುಶ್ರೀ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ಎಂಸಿಸಿ ತಂಡ, ವೆಚ್ಚ ಪರಿಶೀಲನಾ ತಂಡ, ಅಂಕಿ ಅಂಶ ಅಧಿಕಾರಿಗಳ ತಂಡ ಸೇರಿದಂತೆ ಇತರೆ ಚುನಾವಣಾಧಿಕಾರಿ ಗಳ ಸಭೆಯಲ್ಲಿ ಅವರು ನಿರ್ದೇಶನ ನೀಡಿದರು.
‘ಪ್ರತಿ ತಾಲ್ಲೂಕಿನಲ್ಲಿ ಎಂಸಿಸಿ ತಂಡ, ಫ್ಲೈಯಿಂಗ್ ಸ್ಕ್ವಾಡ್, ವೆಚ್ಚ ವೀಕ್ಷಣಾ ತಂಡ, ವೀಡಿಯೊ ಸರ್ವಿಲೆನ್ಸ್ ತಂಡವಿರುತ್ತದೆ. ಎಲ್ಲಾ ತಂಡದವರು ತಾಲ್ಲೂಕು ಸಹಾಯಕ ಚುನಾವಣಾಧಿಕಾರಿಗಳಿಗೆ ನಿತ್ಯ ನಡೆಯುವ ಘಟನೆಗಳ ವರದಿಯನ್ನು ತಪ್ಪದೇ ನೀಡಬೇಕು’ ಎಂದು ಸೂಚಿಸಿದರು.
‘ಸಹಾಯಕ ಚುನಾವಣಾಧಿಕಾರಿ ಗಳು ಕ್ಷೇತ್ರದಲ್ಲಿನ ಮತಗಟ್ಟೆಗಳಲ್ಲಿ ಇರುವ ಮೂಲಸೌಕರ್ಯಗಳ ಪರಿಶೀಲನೆ ನಡೆಸಬೇಕು. ಸಣ್ಣಪುಟ್ಟ ದುರಸ್ತಿ, ಕೇಬಲ್, ದೀಪ ಅಳವಡಿಕೆ, ಕಿಟಕಿ ಗಾಜು ಅಳವಡಿಕೆ ಮಾಡುವ ಕೆಲಸ ಇದ್ದಲ್ಲಿ ತಕ್ಷಣ ಸ್ಥಳೀಯ ಎಸ್ ಡಿ ಎಂಸಿ ಅವರಿಂದ ಮಾಡಿಸಬೇಕು. ಹೆಚ್ಚಿನ ಕೆಲಸವಿದ್ದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ದುರಸ್ತಿ ಕೆಲಸ ಮಾಡಿಸಬೇಕು. ಇಂಥ ಕೆಲಸಗಳ ಬಗ್ಗೆ ಮುಂಚೆಯೇ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.
‘ಮತಗಟ್ಟೆಗಳಲ್ಲಿ ಬೇಕಾದ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಚುನಾವಣಾ ಕಾರ್ಯಕ್ಕೆ ನಿಯೋಜನೆ ಗೊಂಡಿರುವ ಅಧಿಕಾರಿಗಳು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಬೇಕೆಂದು’ ಆದೇಶಿಸಿದರು.
‘ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಬೇಕು. ಇದಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಹಳ್ಳಿ ಹಳ್ಳಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಚುನಾವಣೆ ಸಂಬಂಧ ಅಧಿಕಾರಿಗಳೊಂದಿಗೆ ನಡೆಸುವ ಎಲ್ಲಾ ಸಭೆಗಳಲ್ಲಿ ಚುನಾವಣೆಯಲ್ಲಿ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಬೋಧನೆ ಮಾಡಬೇಕು’ ಎಂದು ತಿಳಿಸಿದರು.
ಸಭೆಯ ನಂತರ ಮಂಜುಶ್ರೀ ಅವರು ಚುನಾವಣಾ ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಕೆ.ಆರ್.ರುದ್ರಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.