ADVERTISEMENT

‘ಮಿಂಚಿನ ನೋಂದಣಿ’ಯ ಮಿಂಚಿನ ಓಟ

ನಗರ ವ್ಯಾಪ್ತಿಯಲ್ಲಿ ಬಿಸಿಲೇರುತ್ತಿದ್ದಂತೆ ಕಡಿಮೆಯಾದ ನೋಂದಣಿ ಪ್ರಕ್ರಿಯೆ

ಕೆ.ಎಸ್.ಪ್ರಣವಕುಮಾರ್
Published 9 ಏಪ್ರಿಲ್ 2018, 7:29 IST
Last Updated 9 ಏಪ್ರಿಲ್ 2018, 7:29 IST

ಚಿತ್ರದುರ್ಗ: ಇಲ್ಲಿನ ಅನೇಕ ಶಾಲೆಗಳ ಬಳಿ ಕೆಲ ಯುವಕ, ಯುವತಿಯರು ಬೆಳಿಗ್ಗೆ 9ಕ್ಕೇ ಬಂದಿದ್ದರು. ತಮ್ಮ ಹೆಸರು ಯಾವಾಗ ನೋಂದಣಿಯಾದೀತು ಎಂದು ಕಾತುರದಿಂದಲೇ ಕಾಯುತ್ತಿದ್ದರು...

ಜಿಲ್ಲಾ ಚುನಾವಣಾ ಆಯೋಗದಿಂದ ಏಕಕಾಲಕ್ಕೆ ವಿವಿಧೆಡೆ ‘ಮಿಂಚಿನ ನೋಂದಣಿ’ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅದಕ್ಕೂ ಮೊದಲು ನಗರ ವ್ಯಾಪ್ತಿಯ ಹಲವು ಮತಗಟ್ಟೆ ಕೇಂದ್ರಗಳ ಬಳಿಗೆ ಬಂದಿದ್ದ ಯುವಕ– ಯುವತಿಯರು ದಾಖಲೆಗಳ ಜೊತೆಗೆ ಭಾವಚಿತ್ರ ಹಿಡಿದು ಅತ್ತಿಂದಿತ್ತ ಓಡಾಡುತ್ತಿದ್ದರು. ಜತೆಗೆ ಮಧ್ಯ ವಯಸ್ಕ ಪುರುಷರು, ಮಹಿಳೆಯರು ಹಾಗೂ ಹಿರಿಯರೂ ಅರ್ಜಿ ಸಲ್ಲಿಸಲು ಬಂದಿದ್ದರು.

ಮಿಂಚಿನ ನೋಂದಣಿ ಪ್ರಾರಂಭದಲ್ಲಿ ಮಿಂಚಿನ ಓಟ ಪಡೆದುಕೊಂಡಿತು. ಮಧ್ಯಾಹ್ನ 1 ಗಂಟೆವರೆಗೂ ಹೊಸದಾಗಿ ನೋಂದಣಿ, ತಿದ್ದುಪಡಿ, ಮತಗಟ್ಟೆ ವರ್ಗಾವಣೆ, ಕ್ಷೇತ್ರ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸುತ್ತಲೇ ಇದ್ದರು. ಬಿಸಿಲೇರುತ್ತಿದ್ದಂತೆ ಜನರ ಸಂಖ್ಯೆ ಕಡಿಮೆಯಾಯಿತು. ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನೇಕ ಕಡೆಗಳಲ್ಲಿ ಶಾಲಾ ಕೊಠಡಿಯೊಳಗೆ, ಮರಗಳ ಕೆಳಗೆ ನೋಂದಣಿ ಮಾಡಿ ಕೊಳ್ಳಲಾಗುತ್ತಿತ್ತು.

ADVERTISEMENT

ಅಭಿಯಾನ ಪ್ರಾರಂಭವಾದ ಕೂಡಲೇ ಜನ ಅರ್ಜಿ ಪಡೆದು ಆಧಾರ್‌ ಕಾರ್ಡ್, ಎಸ್ಸೆಸ್ಸೆಲ್ಸಿ ಮತ್ತು ಪಿಯು ಅಂಕಪಟ್ಟಿ, ಪಾನ್‍ಕಾರ್ಡ್, ಪಡಿತರ ಚೀಟಿ, ನಿವಾಸಿ ಪ್ರಮಾಣಪತ್ರ, ಅಡುಗೆ ಅನಿಲ ಸ್ವೀಕೃತಿ ರಸೀದಿ, ವಿದ್ಯುತ್ ಬಿಲ್, ವಾಹನ ಚಾಲನಾ ಪರವಾನಗಿ, ಬ್ಯಾಂಕ್ ಪಾಸ್‌ಬುಕ್‌ ಹೀಗೆ ವಿವಿಧ ದಾಖಲೆಗಳ ಝೆರಾಕ್ಸ್‌ ಪ್ರತಿಯೊಂದಿಗೆ ಸಲ್ಲಿಸಿದರು.

2018ರ ಜನವರಿ 1ಕ್ಕೆ 18 ವರ್ಷ ತುಂಬಿದ ಕೆಲವರು ಮತಗಟ್ಟೆ ಅಧಿಕಾರಿಗಳಿಂದ ಅರ್ಜಿ ಪಡೆದರು. ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದ ಕಾರಣದಿಂದಲೋ, ಮಾಹಿತಿ ಕೊರತೆಯಿಂದಲೋ ಭರ್ತಿ ಮಾಡಲು ಹರಸಾಹಸ ಪಡುತ್ತಿದ್ದರು.

ಹೊಸಬರಿಗೆ ಅನುಕೂಲ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತ ಚಲಾವಣೆಯಿಂದ 18 ವರ್ಷ ತುಂಬಿದವರು ಹೊರಗೆ ಉಳಿಯಬಾರದು, ಹೆಸರು ಕೈಬಿಟ್ಟು ಹೋದ ಕೆಲವರು ಸೇರ್ಪಡೆಯಾಗಬೇಕು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಮಿಂಚಿನ ನೋಂದಣಿ ಅಭಿಯಾನ ಕೈಗೊಂಡಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಯುವತಿ ರಜಿನಿ ತಿಳಿಸಿದರು.

ವರ್ಗಾವಣೆಗೆ ಎಷ್ಟು ಬಾರಿ ಸಲ್ಲಿಸಬೇಕು: ‘ಈ ಮುಂಚೆ ಅಗಸನಕಲ್ಲು ಮತಗಟ್ಟೆ ಕೇಂದ್ರದ ವ್ಯಾಪ್ತಿಯಲ್ಲಿ ನಾನು ಮತ ಹಾಕುತ್ತಿದ್ದೆ. ಈಗ ಮದುವೆಯಾಗಿ ನಗರದ ಎರಡನೇ ವಾರ್ಡ್‌ನ ಜೋಗಿಮಟ್ಟಿ ರಸ್ತೆಗೆ ಬಂದಿದ್ದೇನೆ.ಇಲ್ಲಿಗೆ ವರ್ಗಾವಣೆಗಾಗಿ ಈ ಮುಂಚೆಯೇ ಅರ್ಜಿ ಸಲ್ಲಿಸಿದ್ದೆ.
ಆದರೂ ಹೆಸರು ಸೇರಿಸಿರಲಿಲ್ಲ. ಈಗಲಾದರೂ ಆಗಲಿದೆಯೇ ಎಂಬುದನ್ನು ಕಾದು ನೋಡುತ್ತೇನೆ’ ಎಂದರು ನೂರುನ್ನಿಸಾ.

‘ಅವಕಾಶ ವ್ಯರ್ಥವಾಗದಿರಲಿ’

‘ಕೆಲ ಮತಗಟ್ಟೆಗಳಲ್ಲಿ ಮತದಾರರ ಹೆಸರು, ಪೋಷಕರ ಹೆಸರು ಹಾಗೂ ಇನಿಷಿಯಲ್‍ಗಳೂ ಬದಲಾಗಿವೆ. ಈ ಬಗ್ಗೆ ಕೇಳಿದರೆ, ಸಮರ್ಪಕವಾಗಿ ಮಾಹಿತಿ ಕೊಡುತ್ತಿಲ್ಲ. ಚುನಾವಣಾ ಆಯೋಗ ಇಷ್ಟೆಲ್ಲ ಅವಕಾಶ ಕಲ್ಪಿಸಿದ ನಂತರವೂ ಪ್ರಯೋಜನ ಆಗದಿದ್ದರೆ ಹೇಗೆ?’ ಎಂದು ಕೆಲ ಮತದಾರರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಚುನಾವಣೆಗಳ ಕೆಲಸ ಕಷ್ಟ ಎಂಬುದು ನಮಗೂ ತಿಳಿದಿರುವ ವಿಷಯ. ಆದರೆ, ಒಂದೇ ಕೆಲಸ ಎರಡು ಮೂರು ಬಾರಿ ಆಗುವುದರಿಂದ ಸಮಯ ಹಾಗೂ ಹಣ ವ್ಯರ್ಥ. ಈ ಬಾರಿಯಾದರೂ ಗಣಕಯಂತ್ರ ತಂತ್ರಾಂಶದಲ್ಲಿ ಸರಿಯಾದ ರೀತಿಯಲ್ಲೇ ಹೆಸರನ್ನು ಸೇರಿಸಲಿ. ಗೊಂದಲಕ್ಕೆ ಅವಕಾಶ ಮಾಡಿಕೊಡಬೇಡಬಾರದು ಎಂದು ಮತದಾರರಾದ ಸುಮಿತ್ರಾ, ಮೋಹನ್ ಅವರು ಚುನಾವಣಾ ಆಯೋಗವನ್ನು ಕೋರಿದ್ದಾರೆ.

ತಪ್ಪು ಆಗದಂತೆ ಎಚ್ಚರ ವಹಿಸಲು ಸೂಚನೆ

ಮಿಂಚಿನ ಅಭಿಯಾನದ ಕುರಿತು ನೇರ ಫೋನ್‍ ಇನ್ ಕಾರ್ಯಕ್ರಮದಲ್ಲೂ ಕೆಲವರು ದೂರುಗಳನ್ನು ಹಂಚಿಕೊಂಡರು. ಇದನ್ನು ಜಿಲ್ಲಾ ಚುನಾವಣಾಧಿಕಾರಿ ಅವರ ಗಮನಕ್ಕೂ ತಂದಿದ್ದೇನೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎನ್. ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ಖಂಡಿತ ಮಿಂಚಿನ ನೋಂದಣಿಯಲ್ಲಿ ತಪ್ಪುಗಳು ಆಗುವುದಿಲ್ಲ ಎಂಬ ವಿಶ್ವಾಸವಿದೆ. ತಪ್ಪು ಆಗದಂತೆ ನೋಡಿಕೊಳ್ಳಲು ಬಿಎಲ್‌ಒ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಪೌರಾಯುಕ್ತರಿಗೂ ನಿರ್ದೇಶನ ನೀಡಲಾಗಿದೆ’ ಎನ್ನುತ್ತಾರೆ ಅವರು.ಮಿಂಚಿನ ನೋಂದಣಿಯ ಮೊದಲ ದಿನ ಎಷ್ಟು ಮಂದಿ ನೋಂದಾಯಿಸಿದ್ದಾರೆ ಎಂಬ ಮಾಹಿತಿ ಏಪ್ರಿಲ್‌ 9ರಂದು ಗೊತ್ತಾಗಲಿದೆ ಎಂದರು.

**

ಗಣಕಯಂತ್ರ ತಂತ್ರಾಂಶದಲ್ಲಿ ನೋಂದಾಯಿಸುವಾಗ ಯಾವುದೇ ತಪ್ಪು ಆಗದಂತೆ ಬಿಎಲ್‌ಒಗಳೇ ನೋಡಿಕೊಳ್ಳುವಂತೆ ಸೂಚಿಸಲಾಗಿದೆ  – ಪಿ.ಎನ್. ರವೀಂದ್ರ, ಸ್ವೀಪ್ ಸಮಿತಿ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.