ಚಿತ್ರದುರ್ಗ: ಆಟೋ ರಿಕ್ಷಾಗಳಿಗೆ ಮೀಟರ್ ಕಡ್ಡಾಯಗೊಳಿಸುವಕ್ಕೆ ಜಿಲ್ಲಾಡಳಿತ ಬಿಗಿ ನಿಲವು ತಳೆದಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ.ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮಾರ್ಚ್ 1ರಿಂದ ಎಲ್ಲ ಆಟೋ ರಿಕ್ಷಾಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ. ಫೆ. 29ರ ಒಳಗೆ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಮುಂಚಿತವಾಗಿಯೇ ತಿಳಿಸಿತ್ತು.
ಈ ಸೂಚನೆಯಂತೆ ಗುರುವಾರ ಬೆಳಿಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಾಲ್ಕು ತಂಡದಲ್ಲಿ ಮೀಟರ್ ಅಳವಡಿಸದ ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳಲು ಮುಂದಾದಾಗ ಆಟೋ ಚಾಲಕರಿಂದ ಪ್ರತಿಭಟನೆ ವ್ಯಕ್ತವಾಯಿತು.
ನಗರದ ಹೈಸ್ಕೂಲ್ ಮೈದಾನದಲ್ಲಿ ಸೇರಿದ ಆಟೋ ಚಾಲಕರು ಮುಷ್ಕರಕ್ಕೆ ಮುಂದಾದರು. ಒತ್ತಾಯ ಪೂರ್ವಕವಾಗಿ ಹಲವು ಆಟೋಗಳಲ್ಲಿನ ಪ್ರಯಾಣಿಕರನ್ನು ಕೆಳಗೆ ಇಳಿಸಿ ಮೈದಾನಕ್ಕೆ ಆಟೋಗಳನ್ನು ತಂದು ನಿಲ್ಲಿಸಿದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆಟೋ ಚಾಲಕರ ಮತ್ತು ಮಾಲೀಕರ ಮನವೊಲಿಸಿ ಮುಷ್ಕರ ಕೈಬಿಡುವಂತೆ ಕೋರಿದಾಗ ಮಾತಿನ ಚಕಮಕಿಯೂ ನಡೆಯಿತು.
`ಹೈಕೋರ್ಟ್ ಆದೇಶದ ಪ್ರಕಾರ ಮೀಟರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಮುಷ್ಕರ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ~ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಡಿವೈಎಸ್ಪಿ ಗಂಗಯ್ಯ, ಸಿಪಿಐ ಓಂಕಾರನಾಯ್ಕ ಮತ್ತಿತರರು ಹಾಜರಿದ್ದರು.
ನಂತರ ಆಟೋ ಚಾಲಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಬಾರದು ಎಂದು ಒತ್ತಾಯಿಸಿದರು.
ಆಟೋಗಳ ವಶ: ಡಿಸಿ
ಗುರುವಾರದಿಂದ ಮೀಟರ್ ಅಳವಡಿಸದ ಆಟೋಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಮುಂದುವರಿಸಲಾಗುವುದು. ಆಟೋ ಚಾಲಕರು ಮುಷ್ಕರ ನಡೆಸಿದರೆ ಬಸ್‌ಗಳನ್ನು ಓಡಿಸಲಾಗುವುದು.
ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಬಹುತೇಕ ಶೇ. 90ರಷ್ಟು ಆಟೋ ಚಾಲಕರು ಮೀಟರ್ ಅಳವಡಿಸಲು ಒಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೈಕೋರ್ಟ್ ಆದೇಶದ ಅನ್ವಯ ಮೀಟರ್ ಅಳವಡಿಸಿದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಮೀಟರ್ ಅಳವಡಿಕೆ ಸಹಕರಿಸದಿದ್ದರೆ ಪರ್ಮಿಟ್‌ರದ್ದುಪಡಿಸಲಾಗುವುದು. ಮೀಟರ್ ಅಳವಡಿಸಿಕೊಂಡು ಹೊಸದಾಗಿ ಅಟೋಗಳನ್ನು ಓಡಿಸಲು ಪರವಾನಗಿ ಕೇಳಿರುವ ಅರ್ಜಿಗಳು ಸಾಕಷ್ಟಿವೆ. ಅಂತವರಿಗೆ ಆಟೋ ಪರ್ಮಿಟ್ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.