ADVERTISEMENT

ಮೊಳಕಾಲ್ಮುರು: ನಾಟಿ ಹೆಚ್ಚಾಗುವ ಸಾಧ್ಯೆತೆ.ಈರುಳ್ಳಿ ಬೀಜ ಅಧಿಕ ಇಳುವರಿ ನಿರೀಕ್ಷೆ

ಕೊಂಡ್ಲಹಳ್ಳಿ ಜಯಪ್ರಕಾಶ
Published 26 ಫೆಬ್ರುವರಿ 2011, 9:50 IST
Last Updated 26 ಫೆಬ್ರುವರಿ 2011, 9:50 IST
ಮೊಳಕಾಲ್ಮುರು: ನಾಟಿ ಹೆಚ್ಚಾಗುವ ಸಾಧ್ಯೆತೆ.ಈರುಳ್ಳಿ ಬೀಜ ಅಧಿಕ ಇಳುವರಿ ನಿರೀಕ್ಷೆ
ಮೊಳಕಾಲ್ಮುರು: ನಾಟಿ ಹೆಚ್ಚಾಗುವ ಸಾಧ್ಯೆತೆ.ಈರುಳ್ಳಿ ಬೀಜ ಅಧಿಕ ಇಳುವರಿ ನಿರೀಕ್ಷೆ   

ಮೊಳಕಾಲ್ಮುರು: ಪ್ರಸ್ತುತ ಈರುಳ್ಳಿ ಬೀಜಕ್ಕೆ ಬೇಡಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ತಾಲ್ಲೂಕಿನಲ್ಲಿ ಈರುಳ್ಳಿ ಬೀಜೋತ್ಪಾದನೆ ಪ್ರಮಾಣವೂ ದುಪ್ಪಟ್ಟಾಗಿದೆ.ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿಕೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ದರ ಸಿಗಬಹುದು ಎಂಬ ನಂಬಿಕೆಯಿಂದ ಈ ವರ್ಷ ಈರುಳ್ಳಿ ನಾಟಿ ಮಾಡುವ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿದ್ದು, ಇದಕ್ಕೆ ಪ್ರಸ್ತುತ ಬೀಜಕ್ಕೆ ಉಂಟಾಗಿರುವ ಬೇಡಿಕೆ ಒತ್ತು ನೀಡಿದೆ.

ತಾಲ್ಲೂಕು ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ ಪ್ರತಿವರ್ಷ ತಾಲ್ಲೂಕಿನಲ್ಲಿ ಸುಮಾರು 85-90 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೀಜೋತ್ಪಾದನೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ 180-200 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೀಜೋತ್ಪಾದನೆ ಮಾಡಲಾಗುತ್ತಿದೆ. ತಾಲ್ಲೂಕಿನ ಈರುಳ್ಳಿ ಬೀಜದ ಕಣಜ ಎಂದು ಖ್ಯಾತಿ ಪಡೆದಿರುವ ಪೂಜಾರಹಳ್ಳಿ ಹಾಗೂ ಸುತ್ತಮುತ್ತ ಸುಮಾರು 80 ಎಕರೆ ಪ್ರದೇಶದಲ್ಲಿ ಬೀಜೋತ್ಪಾದನೆ ಮಾಡಲಾಗುತ್ತಿದೆ. ಉಳಿದಂತೆ ಹಾನಗಲ್, ಕೊಂಡ್ಲಹಳ್ಳಿ, ಕೋನಸಾಗರ, ಮೊಗಲಹಳ್ಳಿ ಸುತ್ತಮುತ್ತ ಹೆಚ್ಚಾಗಿ ನಾಟಿ ಮಾಡಲಾಗಿದೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ ಪ್ರತಿ ಕೆಜಿಗೆ ` 150-200 ದರಕ್ಕೆ ಪ್ರತಿವರ್ಷ ಈರುಳ್ಳಿ ಬೀಜ ಸಿಗುತ್ತಿತ್ತು. ಈ ಬಾರಿ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರ ` 400-450 ಆಸುಪಾಸಿನಲ್ಲಿ ಇದೆ. ಮುಖ್ಯವಾಗಿ ಇಲ್ಲಿಂದ ಬಳ್ಳಾರಿ ಮೂಲಕ ತಮಿಳುನಾಡು, ಚಿಕ್ಕಮಗಳೂರು, ಹಾವೇರಿ, ಧಾರವಾಡ ಜಿಲ್ಲೆಗಳಿಗೆ ಬೀಜ ರಪ್ತು ಮಾಡಲಾಗುತ್ತದೆ.  ಎಕರೆಗೆ ಸಾಮಾನ್ಯವಾಗಿ 3 ಕ್ವಿಂಟಲ್‌ಇಳುವರಿ ಬರುತ್ತದೆ. ಪರಾಗಸ್ಪರ್ಶ ಉತ್ತಮವಾಗಿರುವ ಕಡೆ 4 ಕ್ವಿಂಟಲ್ ದಾಟುವ ನಿರೀಕ್ಷೆ ಇದ್ದು, ಇದರ ಪ್ರಕಾರ ಈ ವರ್ಷ ತಾಲ್ಲೂಕಿನಲ್ಲಿ 500-550 ಕ್ವಿಂಟಲ್ ಈರುಳ್ಳಿ ಬೀಜ ಇಳುವರಿ ಬರುವ ನಿರೀಕ್ಷೆ ಹೊಂದಲಾಗಿದೆ.

ಈರುಳ್ಳಿ ಬೀಜ ಇಳುವರಿಯಲ್ಲಿ ರಾಜ್ಯಮಟ್ಟದಲ್ಲಿ ಗಮನ ಸೆಳೆಯುವ ದಟ್ಟ ಸಾಧ್ಯತೆಗಳಿದ್ದು, ಮಾರ್ಚ್ ಮಧ್ಯ ಭಾಗದಲ್ಲಿ ಕಟಾವು ಮಾಡಲಾಗುವುದು ಎಂದು ಇಲಾಖೆ ಮೂಲಗಳು ಹೇಳುತ್ತವೆ.ಹಲವು ರಂಗಗಳಲ್ಲಿ ಹಿಂದುಳಿದಿರುವ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಈರುಳ್ಳಿ ಬೀಜೋತ್ಪಾದನೆ ಆರ್ಥಿಕವಾಗಿ ಕೃಷಿ ಕ್ಷೇತ್ರದಲ್ಲಿ ಹೊಸ ಬೆಳಕು ಮೂಡಿಸಿರುವುದು ಮಾತ್ರ ಸತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.