ADVERTISEMENT

ಮೊಳಕಾಲ್ಮುರು: 371 ‘ಜೆ’ ಸೇರ್ಪಡೆಗೆ ಆಗ್ರಹಿಸಿ ಪತ್ರ ಚಳುವಳಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 8:59 IST
Last Updated 2 ಏಪ್ರಿಲ್ 2018, 8:59 IST

ಮೊಳಕಾಲ್ಮುರು: ತಾಲ್ಲೂಕನ್ನು 371 ‘ಜೆ’ ಅನುಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟದ ಮುಂದುವರಿದ ಭಾಗವಾಗಿ ಬೃಹತ್ ಸಂಖ್ಯೆಯಲ್ಲಿ ಪತ್ರ ಚಳುವಳಿ ನಡೆಸಲು ಮುಂದಾಗಲು ಹೋರಾಟ ಸಮಿತಿ ತೀರ್ಮಾನಿಸಿದೆ.ಭಾನುವಾರ ಇಲ್ಲಿ ನಡೆದ ಹೋರಾಟ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಅಂಚೆ ಕಾರ್ಡ್‌ನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ರೈತರು, ಕಾರ್ಮಿಕರು, ಅಂಗನವಾಡಿ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸರ್ಕಾರಿ ನೌಕರರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ರಾಜ್ಯದ ರಾಜ್ಯಪಾಲರಿಗೆ ಪತ್ರ ಬರೆಸಲಾಗುವುದು. ಈ ನಿಟ್ಟಿನಲ್ಲಿ ಏ.4ರಂದು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಇದಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ ಎಂದು ಸಮಿತಿಯ ಜಿ.ಸಿ. ನಾಗರಾಜ್‌, ಕಸಾಪ ತಾಲ್ಲೂಕು ಅಧ್ಯಕ್ಷ ಕೊಂಡ್ಲಹಳ್ಳಿ ಜಯಪ್ರಕಾಶ್‌, ಜನಸಂಸ್ಥಾನ ವಿರೂಪಾಕ್ಷಪ್ಪ ಹೇಳಿದರು. ನಂತರ ರಾಂಪುರ ಎಸ್‌ಪಿಎಸ್ಆರ್‌ ಪದವಿ ಕಾಲೇಜಿನಲ್ಲಿ ಪತ್ರ ಚಳವಳಿ ಆಯೋಜಿಸಲಾಗುವುದು. ರಜೆ ಮುಗಿದ ನಂತರ ತಾಲ್ಲೂಕಿನ ಎಲ್ಲಾ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳ ಪತ್ರ ಚಳವಳಿ ಕೈಗೊಳ್ಳಲಾಗುವುದು. ಸರ್ಕಾರದಿಂದ ಇದಕ್ಕೆ ಉತ್ತರ ಬರುವವರೆಗೂ ಸಾವಿರಾರು ಪತ್ರಗಳ ರವಾನಿಸಲಾಗುವುದು. ಇದಕ್ಕೆ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು ಎಂದು ಕೇಳಿಕೊಂಡರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸೇರ್ಪಡೆ ಹೋರಾಟಕ್ಕೆ ಸ್ಪಂದಿಸುವ ಅಂಶವನ್ನು ಸ್ಥಳೀಯ ಪ್ರಣಾಳಿಕೆಯಲ್ಲಿ ಸೇರಿಸಲು ಪಕ್ಷಗಳಿಗೆ ಮನವಿ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಲಾಗುವುದು. ಚುನಾವಣೆ ನಂತರ ಆಯ್ಕೆಯಾಗುವ ನೂತನ ಶಾಸಕರಿಗೆ ಹೋರಾಟ ಸಮಿತಿ ಅಧ್ಯಕ್ಷ ಸ್ಥಾನ ನೀಡಿ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸೇರ್ಪಡೆಗಾಗಿ ನಡೆಯುತ್ತಿರುವ ಹೋರಾಟ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ನೀತಿಸಂಹಿತೆ ಮುಗಿದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ವಿದ್ಯಾರ್ಥಿ ಗಳು, ಸರ್ಕಾರಿ ನೌಕರರು, ಸಂಘ, ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು ಎಂದು ಸಮಿತಿಯ ರಾಮಕೃಷ್ಣ, ಜಾಫರ್‌ ಷರೀಫ್‌, ಸೂರಮ್ಮನಹಳ್ಳಿ ನಾಗರಾಜ್‌ ಮನವಿ ಮಾಡಿದರು.

ADVERTISEMENT

ವೆಡ್ಸ್‌ ಗಂಗಾಧರ್, ಸಾಕ್ಷರ ಭಾರತ್‌ನ ತಿಪ್ಪೇಸ್ವಾಮಿ, ಮಹಾಂತೇಶ್‌, ಖಲಂದರ್, ಪರಮೇಶ್ವರ ಮೂರ್ತಿ, ಯರಿಸ್ವಾಮಿ, ರಾಜೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.