ADVERTISEMENT

ಮೌಲ್ಯಮಾಪನ ಕೇಂದ್ರಕ್ಕೆ ಅಭ್ಯರ್ಥಿಗಳ ಲಗ್ಗೆ!

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 5:55 IST
Last Updated 27 ಏಪ್ರಿಲ್ 2012, 5:55 IST

ಚಿತ್ರದುರ್ಗ: ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಚುರುಕುಗೊಳ್ಳುತ್ತಿದೆ. ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಆದರೆ, ಅಭ್ಯರ್ಥಿಗಳು ಬಹುದಿನಗಳಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಿರುವುದರಿಂದ ಚುನಾವಣಾ ಕಣ ರಂಗೇರಿದೆ.

ಶಿಕ್ಷಕರ ಮನವೊಲಿಸಲು ಅಭ್ಯರ್ಥಿಗಳು ಎಲ್ಲ ರೀತಿಯ ಹರಸಾಹಸ ಮಾಡುತ್ತ್ದ್ದಿದು, ಹತ್ತು ಹಲವು ರೀತಿಯ ಆಮಿಷಗಳನ್ನು ತೋರಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಈಗ ಆರಂಭ ಆಗಿರುವುದರಿಂದ ಅಭ್ಯರ್ಥಿಗಳು ಪ್ರತಿನಿತ್ಯ ಮೌಲ್ಯಮಾಪನ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ.

ಶಿಕ್ಷಕರನ್ನು ಸುಲಭವಾಗಿ ಭೇಟಿಯಾಗಬಹುದು ಎನ್ನುವ ಲೆಕ್ಕಾಚಾರ ಅಭ್ಯರ್ಥಿಗಳದ್ದು. ಎಲ್ಲ ಸ್ಥಳಗಳಿಗೆ ತೆರಳುವ ಬದಲು ಒಂದೇ ಸ್ಥಳದಲ್ಲಿ ಬಹುತೇಕ ಶಿಕ್ಷಕರನ್ನು ಮುಖಾಮುಖಿ ಭೇಟಿಯಾಗಬಹುದು ಎನ್ನುವುದು ಅಭ್ಯರ್ಥಿಗಳ ಅಭಿಪ್ರಾಯ.

ಇದರಿಂದಾಗಿ ಪ್ರತಿದಿನ ಮೌಲ್ಯಮಾಪನ ಆರಂಭವಾಗುವ ಮುನ್ನವೇ ಅಭ್ಯರ್ಥಿಗಳು ಮೌಲ್ಯಮಾಪನ ಕೇಂದ್ರಗಳ ಮುಂದೆ ಹಾಜರಾಗಿ ಶಿಕ್ಷಕರಿಂದ ಮತಯಾಚಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ವಿವರಗಳ ಕರಪತ್ರಗಳನ್ನು ನೀಡಿ ತಮ್ಮನ್ನು ಬೆಂಬಲಿಸುವಂತೆ ಕೋರುವ ದೃಶ್ಯ ಸಾಮಾನ್ಯವಾಗುತ್ತಿದೆ.

ನಗರದಲ್ಲಿ 6 ಶಾಲೆಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ವಿದ್ಯಾವಿಕಾಸ, ಸಂತ ಜೋಸೆಫರ ಕಾನ್ವೆಂಟ್, ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ, ವಾಸವಿ ಶಾಲೆ ಹಾಗೂ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿದೆ.

ಗುರುವಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಅಭ್ಯರ್ಥಿಯೊಬ್ಬರು, ಶಾಲೆಯೊಂದರ ಶತಮಾನೋತ್ಸವದ ಹೆಸರಿನಲ್ಲಿ ಶಿಕ್ಷಕರಿಗೆ ಸಿಹಿ ಊಟ ಆಯೋಜಿಸಿದ್ದರು. ಮೌಲ್ಯಮಾಪನ ಕೇಂದ್ರಗಳಿಗೆ ಶಾಲೆಗೆ ತೆರಳಲು ಮತ್ತು ವಾಪಸ್ ಆಗಮಿಸಲು ಬಸ್ ವ್ಯವಸ್ಥೆ ಸಹ ಮಾಡಲಾಗಿತ್ತು.ಇನ್ನೂ ನಾಲ್ಕೈದು ದಿನಗಳ ಕಾಲ ಮೌಲ್ಯಮಾಪನ ನಡೆಯಲಿದ್ದು, ಈ ಸನ್ನಿವೇಶ ಪುನರಾವರ್ತನೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.