ADVERTISEMENT

ಯೋಜನೆಗಳ ಪ್ರಾಮಾಣಿಕ ಅನುಷ್ಠಾನಕ್ಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 9:05 IST
Last Updated 10 ಮಾರ್ಚ್ 2011, 9:05 IST

ಚಳ್ಳಕೆರೆ: ಭಾಗ್ಯಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಆಗದಂತೆ ಇಲಾಖೆ ಅಗತ್ಯ ಕ್ರಮಕೈಗೊಂಡು ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದು ಪಿ. ಮಹದೇವಪುರ ತಾಲ್ಲೂಕು ಪಂಚಾಯ್ತಿ ಸದಸ್ಯ ನರಸಿಂಹಯ್ಯ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗೆ ತಾಕೀತು ಮಾಡಿದರು.

ಚಳ್ಳಕೆರೆ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಇಲಾಖೆ ಪ್ರಗತಿ ಪರಿಶೀಲನಾ ವರದಿ ಮಂಡಿಸುವಾಗ ಅವರು ಮಾತನಾಡಿದರು.
ಮಹಿಳಾ ಸಬಲೀಕರಣಕ್ಕೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಹಿಳಾ ದೌರ್ಜನ್ಯಗಳು ಸಂಭವಿಸಿದಾಗ ನೆರವಿಗೆ ಬರಲು ತೆರೆಯಲಾಗಿರುವ ಮಹಿಳಾ ಸಾಂತ್ವನ ಕೇಂದ್ರಗಳ ಬಗ್ಗೆ ಮಹಿಳೆಯರಿಗೆ ಮಾಹಿತಿ ಒದಗಿಸಬೇಕು. ಗ್ರಾಮಗಳಿಂದ ದೂರ ಇರುವ ಹಟ್ಟಿಗಳಲ್ಲಿರುವ ಮಕ್ಕಳಿಗೆ ಅಂಗನವಾಡಿ ಸೌಲಭ್ಯ ಕಲ್ಪಿಸಬೇಕು. ಸ್ವ-ಸಹಾಯ ಸಂಘಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಹಿಳಾ ಅಭಿವೃದ್ಧಿಗೆ ಮನ್ನಣೆ ಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಚಿತ್ರನಾಯಕನಹಳ್ಳಿ ತಾ.ಪಂ.ಸದಸ್ಯ ಸಿ.ಟಿ. ಶ್ರೀನಿವಾಸ, ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಬಾಂಡ್ ನೀಡುವಾಗ ಇಲಾಖೆಯ ಅಧಿಕಾರಿಗಳು  ಲಂಚ ಕೇಳುತ್ತಿರುವುದು ಬೆಳಕಿಗೆ ಬಂದಿದೆ. ಅಂತಹ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡು ಜನಸಾಮಾನ್ಯರಿಗೆ ಕೆಲಸ ಮಾಡಿಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಬೋರಮ್ಮ, ಅಧಿಕಾರಿಗಳಿಗೆ ಪ್ರಶ್ನೆ ಕೇಳುವಾಗ ಎದ್ದು ನಿಂತು ಮಾತನಾಡಿ, ಹಾಗೂ ಒಬ್ಬೊಬ್ಬರಾಗಿ ಪ್ರಶ್ನೆ ಕೇಳಿ ಎಂದಾಗ, ಬಿಜೆಪಿ ಸದಸ್ಯ ಸಿ.ಟಿ. ಶ್ರೀನಿವಾಸ್, ಅಧ್ಯಕ್ಷರು ಅಧಿಕಾರಿಗಳ ಪರವಾಗಿ ಮಾತನಾಡಬಾರದು. ಬದಲಾಗಿ ಸದಸ್ಯರ ಅಹವಾಲು ಆಲಿಸಬೇಕು ಎಂದರು.

ಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯರನ್ನು ಬದಲಾವಣೆ ಮಾಡಬೇಕು. ಗಡಿಭಾಗದ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಿದೆ ಎಂದು ತಾ.ಪಂ. ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಬೇಸರಿಸಿದರು.

 ತಾಲ್ಲೂಕಿನಲ್ಲಿ ಕಳೆದ ಬಾರಿ ಶೇಂಗಾ ಬೆಳೆಗಾರರು ಸಂಪೂರ್ಣ ನಷ್ಟ ಅನುಭವಿಸಿದ್ದು, ಬೆಳೆವಿಮೆ ಬಗ್ಗೆ ಕೃಷಿ ಇಲಾಖೆ ರೈತರಿಗೆ ಮಾಹಿತಿ ನೀಡಿಲ್ಲದ ಕಾರಣ ರೈತರು ಬೆಳೆವಿಮೆ ಪಡೆದಿಲ್ಲ. ಬೇರೆ ತಾಲ್ಲೂಕುಗಳಲ್ಲಿ ಬೆಳೆವಿಮೆ ಪಡೆಯುವ ಮೂಲಕ ರೈತರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪರಶುರಾಂಪುರ ತಾ.ಪಂ. ಸದಸ್ಯ ವೆಂಕಟೇಶ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸಭೆಯಲ್ಲಿ ಅಧ್ಯಕ್ಷೆ ಬೋರಮ್ಮ, ಉಪಾಧ್ಯಕ್ಷ ಮಂಜುನಾಥ್, ಇಒ ರಾಮನಾಥಗುಪ್ತಾ ಹಾಗೂ ಗುರುಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.