ADVERTISEMENT

ರಂಗದಾಸೋಹಕ್ಕೆ ದಶಮಾನೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 7 ಜನವರಿ 2013, 10:02 IST
Last Updated 7 ಜನವರಿ 2013, 10:02 IST
ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿಯಲ್ಲಿ ಕಳೆದ ವರ್ಷ ಪ್ರದರ್ಶನಗೊಂಡ `ಜುಗ್ಗಪ್ಪಯ್ಯನ ತಿಪ್ಪರಲಾಗ' ನಾಟಕದ ಒಂದು ದೃಶ್ಯ.
ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿಯಲ್ಲಿ ಕಳೆದ ವರ್ಷ ಪ್ರದರ್ಶನಗೊಂಡ `ಜುಗ್ಗಪ್ಪಯ್ಯನ ತಿಪ್ಪರಲಾಗ' ನಾಟಕದ ಒಂದು ದೃಶ್ಯ.   

ಹೊಳಲ್ಕೆರೆ: ಮಲ್ಲಾಡಿಹಳ್ಳಿ ಎಂದ ತಕ್ಷಣ ನೆನಪಾಗುವುದು ರಾಘವೇಂದ್ರ ಸ್ವಾಮೀಜಿ, ಯೋಗ, ವ್ಯಾಯಾಮ, ಆಯುರ್ವೇದ, ಶಿಸ್ತು, ಶಿಕ್ಷಣ. ಆದರೆ ಈ ತಿರುಕನ ಆಶ್ರಮದಲ್ಲಿ ಪ್ರತೀವರ್ಷ ಐದು ದಿನಗಳ ನಾಟಕ ಜಾತ್ರೆಯೂ ನಡೆಯುತ್ತದೆ. ಆಶ್ರಮದಲ್ಲಿ ನಡೆಯುವ `ತಿರುಕನೂರಿನ ರಂಗದಾಸೋಹ' ಎಂಬ ನಾಟಕೋತ್ಸವ ನೋಡ ನೋಡುತ್ತಲೇ ಈ ವರ್ಷ ದಶಮಾನೋತ್ಸವ ಆಚರಿಸಿಕೊಳ್ಳುತ್ತಿದೆ.

ರಂಗಪ್ರಿಯ ರಾಘವೇಂದ್ರ ಸ್ವಾಮೀಜಿ: ತನ್ನನ್ನು ತಾನು ಹೆಮ್ಮೆಯಿಂದ `ತಿರುಕ' ಎಂದೇ ಹೇಳಿಕೊಂಡು ಜೋಳಿಗೆ ಹಿಡಿದು, ಭಿಕ್ಷೆ ಬೇಡಿ ಆಶ್ರಮ ಕಟ್ಟಿ ಬೆಳೆಸಿದ ರಾಘವೇಂದ್ರ ಸ್ವಾಮೀಜಿಗೆ ಆಯುರ್ವೇದ, ವ್ಯಾಯಾಮ, ಶಿಸ್ತುಗಳೊಂದಿಗೆ ರಂಗಕಲೆಯ ಮೇಲೂ ತುಡಿತವಿತ್ತು. ಆಸಕ್ತಿ ಅಷ್ಟೇ ಅಲ್ಲ ನಾಟಕ ರಚನೆಯೊಂದಿಗೆ ತಾವೇ ಅಭಿನಯವನ್ನೂ ಮಾಡಿ ಕಲಾಸಕ್ತರ ಮನಸ್ಸನ್ನು ಸೆಳೆಯುತ್ತಿದ್ದರು. ಬಾರಕೂರಿನ ಬಾ ರಾಘವೇಂದ್ರ ರಾವ್ ಬಾಲ್ಯದಿಂದಲೇ ದೇವರನ್ನು ಕಾಣುವ ಹಂಬಲದಿಂದ ಸಾಧು ಸಂತರನ್ನು ಭೇಟಿಯಾಗಿ ಸ್ವಾಮಿ ಶಿವಾನಂದ ಆಶ್ರಮಕ್ಕೆ ಬಂದು ಧ್ಯಾನ ಮಾರ್ಗ ಆಯ್ದುಕೊಂಡರು.

ಬರೋಡಾದ ಪ್ರೊ.ರಾಜರತ್ನ ಮಾಣಿಕ್ ರಾಯ್ ಅವರ ಶಿಷ್ಯರಾಗಿ ಯೋಗ ಮತ್ತು ದೈಹಿಕ ಶಿಕ್ಷಣ ಪಡದರು. ನಂತರ ಪಾಕಿಸ್ತಾನದ ಕರಾಚಿಗೆ ಹೋಗಿ ಆಯುರ್ವೇದ ತಜ್ಞ ಪಂಡಿತ್ ಲಕ್ಷ್ಮಣ ಬಾಬಾ ಅವರಿಂದ ಆಯುರ್ವೇದ ವಿದ್ಯೆ ಕರಗತ ಮಾಡಿಕೊಂಡರು.
ನಂತರ ಗಾಂಧೀಜಿ ಅವರ ಗ್ರಾಮೀಣ ಜನರ ಸೇವೆಯ ಬಗ್ಗೆ ಪ್ರಭಾವಿತರಾಗಿ ಊರೂರು ಅಲೆದು, ಬಡವರ ಸೇವೆ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ 41 ದಿನಗಳ ಯೋಗ ಶಿಬಿರ ನಡೆಸಿ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಹೀಗೆ ಅಲೆಯುತ್ತಾ 1942ರಲ್ಲಿ ಮಲ್ಲಾಡಿಹಳ್ಳಿಗೆ ಬಂದರು. ಗ್ರಾಮದಲ್ಲಿ ಕಾಲರಾ ರೋಗದಿಂದ ತತ್ತರಿಸುತ್ತಿದ್ದ ಜನರ ಆರೈಕೆ ಮಾಡಿದರು. ಮನೆಮನೆಗೆ ಹೋಗಿ ಚಿಕಿತ್ಸೆ ನೀಡಿ, ಶುಚಿತ್ವದ ಪಾಠ ಹೇಳಿದರು. ಅಪಾರ ಪ್ರೀತಿ ಗಳಿಸಿದ ರಾಘವೇಂದ್ರ ರಾವ್ ಅವರನ್ನು ಜನ ಮುಂದಿನ ಊರಿಗೆ ಕಳಿಸದೆ ತಮ್ಮಲ್ಲೇ ಇಟ್ಟುಕೊಂಡರು.

`ವ್ಯಾಯಾಮ ಮೇಷ್ಟ್ರು' ಎಂದು ಕರೆಯುತ್ತಿದ್ದ ಇವರನ್ನು ಇಲ್ಲಿನ ಜನ ಅಭಿಮಾನದಿಂದ `ಸ್ವಾಮೀಜಿ' ಎಂದು ಕರೆದರು. 1943ರಲ್ಲಿ ಆಶ್ರಮ ಆರಂಭಿಸಿ, ರಾಘವೇಂದ್ರ ಸ್ವಾಮೀಜಿ ಆಗಿ ಇಲ್ಲಿಯೇ ಉಳಿದರು. ಶಿಷ್ಯರಾಗಿ ಬಂದ ಸೂರ್‌ದಾಸ್ ಜಿ ಕೂಡ ಸ್ವಾಮೀಜಿಯೊಂದಿಗೆ ಆಶ್ರಮದ ಬೆಳವಣಿಗೆಗೆ ಕೈಜೋಡಿಸಿದರು. ಖಾದಿಯ ಅರ್ಧತೋಳಿನ ಬಿಳಿ ಅಂಗಿ ಮತ್ತು ಚಡ್ಡಿ ತೊಡುತ್ತಿದ್ದ ಸ್ವಾಮೀಜಿ ಸರಳತೆಗೆ  ಹೆಸರಾಗಿದ್ದರು. ಮೂಲೆಯಲ್ಲಿದ್ದ  ಹಳ್ಳಿಯನ್ನು  ವಿಶ್ವಮಟ್ಟದಲ್ಲಿ  ಪರಿಚಯ  ಆಗುವಂತೆ  ಮಾಡಿದರು. ಅನೇಕ ಶಿಕ್ಷಣ  ವಿಭಾಗಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು.

ಆಶ್ರಮದಲ್ಲಿ ಇಂದಿಗೂ ಯೋಗ, ಆಯುರ್ವೇದ ಚಟುವಟಿಕೆಗಳು ನಡೆಯುತ್ತಿದ್ದು, ಆಶ್ರಮ ಕಟ್ಟಿ ಬೆಳೆಸಿದ್ದ ರಾಘವೇಂದ್ರ ಸ್ವಾಮೀಜಿ ಮತ್ತು ಸೂರ್‌ದಾಸ್ ಜಿ ಅವರಿಗೆ ನಮನ ಸಲ್ಲಿಸುವ ಉದ್ದೇಶದಿಂದ ಪ್ರತೀ ವರ್ಷ ಪುಣ್ಯಾರಾಧನೆ ನಡೆಸಲಾಗುತ್ತದೆ. ಇದರೊಂದಿಗೆ ಸ್ವಾಮೀಜಿಗೆ ಪ್ರಿಯವಾದ ನಾಟಕೋತ್ಸವವನ್ನೂ ನಡೆಸಲಾಗುತ್ತದೆ. ಈ ವರ್ಷ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಜ. 9ರಿಂದ 13ರ ವರೆಗೆ ಆಶ್ರಮದ ಆವರಣದ ಸೂರ್‌ದಾಸ್ ಜಿ ರಂಗಮಂಟಪದಲ್ಲಿ ನಾಟಕ ಜಾತ್ರೆ ನಡೆಯಲಿದೆ. ಆಶ್ರಮದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯೇ ನಾಟಕ ಅಭಿನಯಿಸಲಿರುವುದು ಇಲ್ಲಿನ ವಿಶೇಷ.

ಜ. 9ರಂದು ಎಚ್.ಎಸ್. ವೆಂಕಟೇಶ ಮೂರ್ತಿ ವಿರಚಿತ `ಧರಣಿ ಮಂಡಲ ಮಧ್ಯದೊಳಗೆ', 10ರಂದು ಮುಕುಂದನ್ ಅವರ ಉನ್ನಿಕಥಾ ಆಧಾರಿತ `ಗಾಜಿನ ಮರ', 11ರಂದು ಡಾ.ಚಂದ್ರಶೇಖರ ಕಂಬಾರ ಅವರ `ಶಿವರಾತ್ರಿ', 12ರಂದು ಡಾ.ಜಿ.ಎನ್. ಮಲ್ಲಿಕಾರ್ಜುನ ವಿರಚಿತ `ಮಹಾಕ್ರಾಂತಿ', 13ರಂದು ಪ್ರೊ.ರಾಘವೇಂದ್ರ ಪಾಟೀಲ ಮೂಲಕತೆ ಆಧಾರಿತ `ಬೆಳ್ಳಕ್ಕಿಗಳ ಲೋಕದಲ್ಲಿ' ನಾಟಕಗಳು ಪ್ರದರ್ಶನಗೊಳ್ಳಲಿವೆ.

`ಆಶ್ರಮದ ರಂಗದಾಸೋಹ ದಶಮಾನೋತ್ಸವ ಆಚರಿಸಿ ಕೊಳ್ಳುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ. ಬರಿಗೈಯಲ್ಲಿ ಬಂದು, ಸೇವೆಯ ಕೈಂಕರ್ಯದಲ್ಲಿ ತೊಡಗಿ, ಭಿಕ್ಷೆ ಬೇಡಿ ಬೆಲೆಕಟ್ಟಲಾರದಷ್ಟು ದೊಡ್ಡ ಆಶ್ರಮ ಕಟ್ಟಿದ ರಾಘವೇಂದ್ರ ಸ್ವಾಮೀಜಿ ಅವರಿಗೆ ನಾವೆಲ್ಲಾ ಋಣಿಗಳು. ರಾಘವೇಂದ್ರ ಸ್ವಾಮೀಜಿ ಮತ್ತು ಸೂರ್‌ದಾಸ್‌ಜಿ ಸ್ವಾಮೀಜಿ ಅವರ ಸ್ಮರಣೆಗಾಗಿ ಆಶ್ರಮದ ಆವರಣದಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ಸ್ಮಾರಕ ಮತ್ತು ಧ್ಯಾನಮಂದಿರ ನಿರ್ಮಿಸಲಾಗುತ್ತಿದ್ದು, ಅಭಿಮಾನಿಗಳು ಆರ್ಥಿಕ ನೆರವು ನೀಡಬಹುದು.

ದಾನಿಗಳಿಗೆ ಆದಾಯ ತೆರಿಗೆ ಜಿ. 80 ಅಡಿಯಲ್ಲಿ ತೆರಿಗೆ ವಿನಾಯಿತಿ ಇದ್ದು, ಅಧ್ಯಕ್ಷರು, ಅನಾಥ ಸೇವಾಶ್ರಮ ಟ್ರಸ್ಟ್, ಮಲ್ಲಾಡಿಹಳ್ಳಿ ಹೆಸರಿಗೆ ಡಿಡಿ ಅಥವಾ ಚೆಕ್ ಮೂಲಕ ಹಣ ಕಳುಹಿಸಬಹುದು. ಮಲ್ಲಾಡಿಹಳ್ಳಿ ಸಿಂಡಿಕೇಟ್ ಬ್ಯಾಂಕ್ ಐಎಫ್‌ಎಸ್‌ಸಿ: ಎಸ್‌ವೈಎನ್‌ಬಿ0001002, ಎಸ್‌ಬಿ ಖಾತೆ: 100222027394ಗೆ ನೇರವಾಗಿ ನೆಫ್ಟ್ ಮೂಲಕ ಹಣ ಕಳಿಸಬಹುದು ಎಂದು ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT