ADVERTISEMENT

ರಕ್ಷಣೆಗೆ ಶ್ರಮಿಸುವ ಪೊಲೀಸರ ಸೇವೆ ಸ್ಮರಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 5:50 IST
Last Updated 22 ಅಕ್ಟೋಬರ್ 2011, 5:50 IST

ಚಿತ್ರದುರ್ಗ: ಸಮಾಜದ ರಕ್ಷಣೆಗೆ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ದೇಶ ರಕ್ಷಣೆಗಾಗಿ ಪ್ರಾಣವನ್ನೇ ಮುಡಿಪಾಗಿಡುವ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ ಹರೀಶ್‌ಕುಮಾರ್ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸರ ಬಗ್ಗೆ ಜನರಲ್ಲಿ ಭಯ, ಭೀತಿ ಸಹಜ. ಲಾಠಿ ಮತ್ತು ಬೂಟಿನ ಶಬ್ದ ಜನರಲ್ಲಿ ಭಯ ಹುಟ್ಟಿಸುತ್ತವೆ. ಇದು ಅನಿವಾರ್ಯ. ಪೊಲೀಸರ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಹೊಂದಿರುವ ವ್ಯಕ್ತಿಗಳು ಸಹ ತನಗೆ ಅನ್ಯಾಯ ಅಥವಾ ದೌರ್ಜನ್ಯ ನಡೆದಾಗ ಪರಿಹಾರಕ್ಕೆ ಮತ್ತು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗುತ್ತಾರೆ ಎಂದು ನುಡಿದರು.

ಇತರೆ ಇಲಾಖೆಗಳಿಗಿಂತ ಪೊಲೀಸರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸಂಚಾರಿ ಪೊಲೀಸರ ಸ್ಥಿತಿಯೂ ಶೋಚನೀಯ. ಕೆಲವೊಮ್ಮೆ ಪೊಲೀಸರು ಸಹ ದೌರ್ಜನ್ಯದ ಅಪಖ್ಯಾತಿಗೊಳಗಾಗುತ್ತಾರೆ ಎಂದು ಹೇಳಿದರು.

1959ರ ಅ. 21ರಂದು ಗಡಿ ರಕ್ಷಿಸುತ್ತಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಮೇಲೆ ಚೀನಿಯರು ದಾಳಿ ನಡೆಸಿದಾಗ ಪ್ರಾಣದ ಹಂಗು ತೊರೆದು ಸೀಮಿತ ಶಸ್ತ್ರಾಸ್ತ್ರಗಳೊಂದಿಗೆ 10 ಸಿಬ್ಬಂದಿ ಹೋರಾಡಿ ಮೃತಪಟ್ಟರು. ಈ ಹುತಾತ್ಮರ ಸ್ಮರಣೆಗಾಗಿ ಪ್ರತಿ ವರ್ಷ ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಹುತಾತ್ಮರ ಹೆಸರುಗಳನ್ನು ಓದಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್, ಈ ವರ್ಷ 636 ಪೊಲೀಸ್ ಸಿಬ್ಬಂದಿ ವಿವಿಧ ಘಟನೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಪುರಿ ಮತ್ತಿತರರು ಹಾಜರಿದ್ದರು. ಶಿವರಾಂ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.