ADVERTISEMENT

ರೋಗ ನಿಯಂತ್ರಿಸಲು ಅಜ್ಜಿ ಹಬ್ಬ!

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 9:10 IST
Last Updated 15 ಜುಲೈ 2012, 9:10 IST

ಭರಮಸಾಗರ: ಗ್ರಾಮದಲ್ಲಿ ಶುಕ್ರವಾರ ಸಂಭ್ರಮದಿಂದ `ಅಜ್ಜಿ ಹಬ್ಬ~ ಆಚರಿಸಲಾಯಿತು. ಸಾಂಕ್ರಾಮಿಕ ಕಾಯಿಲೆಗಳು ಬಾರದಿರಲಿ, ಗ್ರಾಮ ದುಷ್ಟಶಕ್ತಿಗಳ ಕಾಟದಿಂದ ಮುಕ್ತವಾಗಿರಲಿ ಎನ್ನುವ ನಂಬಿಕೆಯಿಂದ ಅಜ್ಜಿ ಹಬ್ಬ ಆಚರಿಸಲಾಗುತ್ತದೆ ಎನ್ನುತ್ತಾರೆ ಇಲ್ಲಿನ ಹಿರಿಯರು.


ಶುಕ್ರವಾರ ಹಬ್ಬದ ಪ್ರಯುಕ್ತ ಗ್ರಾಮದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದವು. ಸಂಜೆ ಹಬ್ಬ ಆಚರಣೆಯಲ್ಲಿ ತೊಡಗಿಕೊಂಡ ಪ್ರತಿ ಮನೆಯವರು ಮಡಿಯಿಂದ ಪುಟ್ಟಿಗಳಲ್ಲಿ ಹೂ, ಹಣ್ಣು, ಹೋಳಿಗೆ ಎಡೆಯನ್ನು ದೇವಸ್ಥಾನದ ಬಳಿ ತಂದು ಪೂಜೆ ಸಲ್ಲಿಸಿದರು.

ಬಳಿಕ ದುರ್ಗಾಂಬಿಕ ಮತ್ತು ಮಾರಿಕಾಂಬಾ ದೇವಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಗ್ರಾಮದ ಗಡಿವರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಬೇವಿನಮರದ ಕೆಳಗೆ ಪೂಜೆ ಸಲ್ಲಿಸಿದ ನಂತರ ಭಕ್ತರು ಪುಟ್ಟಿಗಳಲ್ಲಿ ತಂದ ಎಡೆ ಅರ್ಪಿಸಿದರು. ದೇವರ ಮೂರ್ತಿಗಳನ್ನು ಮರಳಿ ದೇವಸ್ಥಾನಕ್ಕೆ ಕರೆ ತಂದು ಗುಡಿತುಂಬಿಸಲಾಯಿತು. ಸಮಾಳ, ಭಜನೆ ಮುಂತಾದ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಮಳೆಗೆ ವಿಶೇಷ ಪೂಜೆ
ಹೋಬಳಿಯಾದ್ಯಂತ ಮಳೆ ಬಾರದೆ ಕಂಗಲಾಗಿರುವ ರೈತರು ಇದೀಗ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.
ಸಮೀಪದ ಹೆಗ್ಗೆರೆ ಗ್ರಾಮದಲ್ಲಿ ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ಬಾದಾಮಟ್ಟಿನ ಸರದ ಪುಣ್ಯ ಕ್ಷೇತ್ರದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು.


ಊರಾಚೆ ಗುಡ್ಡಗಾಡು ಪ್ರದೇಶದಲ್ಲಿರುವ ಈ ಸ್ಥಳದಲ್ಲಿ ನೀರು ಸಂಗ್ರಹಗೊಂಡರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಅಂತರ್ಜಲ ಹೆಚ್ಚುತ್ತದೆ. ಈ ಬಾರಿ ನಿರೀಕ್ಷೆಯಂತೆ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಹೆಗ್ಗೆರೆ ಗ್ರಾಮಸ್ಥರು ಅನಾದಿಕಾಲದಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಶುಕ್ರವಾರ ರಾತ್ರಿ ದುರ್ಗಮ್ಮ, ಆಂಜನೇಯ, ಸಿದ್ದಪ್ಪ ದೇವರುಗಳನ್ನು ಅಲಂಕೃತ ಹೂವಿನ ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ಮೂಲಕ ಬಾದಾಮಟ್ಟಿಸರದ ಬಳಿ ಕರೆತಂದು ಸಾಂಪ್ರದಾಯಿಕ ರೀತಿ ರಿವಾಜುಗಳನ್ನು ನೆರವೇರಿಸಿದರು.

ಬಳಿಕ ಗಂಗಾಪೂಜೆ ನೆರವೇರಿಸಿ ಪುಣ್ಯಕ್ಷೇತ್ರದಲ್ಲಿನ ನೀರನ್ನು 101 ಬಿಂದಿಗೆಗಳಲ್ಲಿ ಸಂಗ್ರಹಿಸಲಾಯಿತು. ಅನ್ನಸಂತರ್ಪಣೆ ನಂತರ ಮೆರವಣಿಗೆ ಮಾಡಿ ಪ್ರಸಾದ ವಿತರಿಸಿ ದೇವರನ್ನು ಗುಡಿದುಂಬಿಸಲಾಯಿತು.
ಸಮಾಳ, ಭಜನೆ ಮುಂತಾದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗ್ರಾಮ ಪಂಚಾಯ್ತಿ ಸದಸ್ಯರಾದ ನರಸಿಂಹಮೂರ್ತಿ, ಹೇಮಾಚಾರ್, ಮುಖಂಡರಾದ ಲಿಂಗಪ್ಪ, ಗುರುಮೂರ್ತಿ, ಗುಡ್ಡಪ್ಪ, ವಸಂತಕುಮಾರ್, ಜಕಣಾಚಾರಿ, ಪಿ. ಜಯಪ್ಪ, ಕರಿಬಸಪ್ಪ, ಸುನೀಲ್, ಪರುಶುರಾಮ್, ಮಂಜುನಾಥ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.