ADVERTISEMENT

ಲೇಖಕರಿಗೂ ನೆಮ್ಮದಿಯ ಬದುಕು ಸಿಕ್ಕಿಲ್ಲ

ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 5:40 IST
Last Updated 23 ಡಿಸೆಂಬರ್ 2013, 5:40 IST
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಲೇಖಕ ಮೋದೂರು ತೇಜ ಅವರ ‘ಅರ್ಧಕ್ಕೆ ನಿಂತ ಚಿತ್ರ’ ಕಥಾ ಸಂಕಲನವನ್ನು ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ ಬಿಡುಗಡೆಗೊಳಿಸಿ ಮಾತನಾಡಿದರು. ಲೇಖಕ ಮೋದೂರು ತೇಜ, ಪತ್ರಕರ್ತ ಮೇಘಾ ಗಂಗಾಧರ್‌ನಾಯ್ಕ್‌, ವಿಮರ್ಶಕಿ ತಾರಿಣಿ ಶುಭದಾಯಿನಿ ಹಾಜರಿದ್ದರು.
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಲೇಖಕ ಮೋದೂರು ತೇಜ ಅವರ ‘ಅರ್ಧಕ್ಕೆ ನಿಂತ ಚಿತ್ರ’ ಕಥಾ ಸಂಕಲನವನ್ನು ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ ಬಿಡುಗಡೆಗೊಳಿಸಿ ಮಾತನಾಡಿದರು. ಲೇಖಕ ಮೋದೂರು ತೇಜ, ಪತ್ರಕರ್ತ ಮೇಘಾ ಗಂಗಾಧರ್‌ನಾಯ್ಕ್‌, ವಿಮರ್ಶಕಿ ತಾರಿಣಿ ಶುಭದಾಯಿನಿ ಹಾಜರಿದ್ದರು.   

ಚಿತ್ರದುರ್ಗ: ಪ್ರಸ್ತುತ ಲೇಖಕರಿಗೆ ಸುಭದ್ರ ಹಾಗೂ ನೆಮ್ಮದಿಯ ಬದುಕು ಸಿಕ್ಕಿಲ್ಲ ಎಂದು ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ ಬೇಸರ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸೃಷ್ಟಿಸಾಗರ ಪ್ರಕಾಶನ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲೇಖಕ ಮೋದೂರು ತೇಜ ಅವರ ‘ಅರ್ಧಕ್ಕೆ ನಿಂತ ಚಿತ್ರ’ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಗುರುಗಳು ಶಿಷ್ಯರ, ತಂದೆ–ತಾಯಿಗಳು ಮಕ್ಕಳ ಬೆಳವಣಿಗೆ ಬಯಸುತ್ತಾರೆ. ಅವರ ಸಾಧನೆ ಬಿಟ್ಟರೆ ಬೇರೆ ಸಂತೋಷ ಅವಗಿರುವುದಿಲ್ಲ. ದಲಿತ ವರ್ಗ ಕಥನಾ ಯಾರಿಂದಲೂ ಅನಾವರಣವಾಗಿಲ್ಲ. ದಲಿತ ಲೇಖಕರು ಸಾಮಾನ್ಯವಾಗಿ ಮೇಲ್ವರ್ಗದ ವಿರುದ್ಧ ಆಕ್ರೋಶಭರಿತ ಲೇಖನಗಳನ್ನೇ ಹೆಚ್ಚಾಗಿ ಬರೆಯುವುದು ಸಹಜ. ಆದರೆ, ಮೋದೂರು ತೇಜ ಅವರು ತಮ್ಮ ಬರವಣಿಗೆಯಲ್ಲಿ ಎಲ್ಲಿಯೂ ಆಕ್ರೋಶ ತೋರಿಸಿಲ್ಲ. ಅದಕ್ಕೆ ಬದಲಾಗಿ ತಣ್ಣನೆಯ ಜ್ಞಾನಪೂರ್ವಕ ಬರವಣಿಗೆಯನ್ನು ಕಥಾಸಂಕಲನದಲ್ಲಿ ಮೂಡಿಸಿರುವುದು ಅತ್ಯಂತ ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಕಲನದಲ್ಲಿ ಆಧ್ಯಾತ್ಮಿಕ ಗುಂಗಿನ ಪಾತ್ರಗಳಿವೆ. ಬರಹಗಾರರು ಹೆಚ್ಚಾಗಿ ಬೆಳೆಯಬೇಕು. ಆದರೆ, ದಲಿತ ಯುವ ಬರಹಗಾರರಿಗೆ ಇನ್ನು ನೆಮ್ಮದಿಯಾಗಿ ನೆಲೆ ನಿಲ್ಲುವಂತ ವಾತಾವರಣವಿಲ್ಲದಿರುವುದು ಅತ್ಯಂತ ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಕೃತಿ ಕುರಿತು ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿ, ಸಾಹಿತ್ಯದಲ್ಲಿ ನಿರಂತರವಾಗಿ ಕೃಷಿ ಮಾಡುತ್ತಲೆ ಇರಬೇಕು. ಆಗ ಮಾತ್ರ ಬರವಣಿಗೆಯಲ್ಲಿ ಕೈಪಳಗಿಸಿಕೊಳ್ಳಲು ಸಹಕಾರಿಯಾಗಲಿದೆ. ಅಧ್ಯಯನ ಬರವಣಿಗೆಯ ಪರಿಶ್ರಮವನ್ನು ಸದಾ ಸಾಹಿತ್ಯದ ಮೂಲಕ ಕೇಳುತ್ತಲೆ ಇರುತ್ತದೆ ಎಂದು ಹೇಳಿದರು.

ಕನ್ನಡದಲ್ಲಿ ಎಲ್ಲರೂ ಕಥೆಗಳನ್ನು ಇಷ್ಟಪಡುವುದರಿಂದ ಸಾಹಿತ್ಯದ ನೆಪದಲ್ಲಿ ಸಾಹಿತಿಗಳಿಗೆ ಅವಕಾಶವಿದೆ. ಕಥೆಗಾರರ ಕೊರತೆ ಈಗಲೂ ಅನುಭವಿಸುವಂತಾಗಿದೆ. ಆದ್ದರಿಂದ ಹೊಸ ಬರಹಗಾರರು ಇಂದು ಅವಶ್ಯಕವಾಗಿ ಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಣ್ಣ ಕಥೆಯ ಆಳದಲ್ಲಿ ವಿಷಾದ ಹೊಂದಿಕೊಂಡಿರುತ್ತದೆ. ಜಾಗತೀಕರಣದ ಒಳಗೆ ಎಚ್ಚೆತ್ತುಕೊಳ್ಳಬೇಕಾದ ಪಾಠ ಮೋದೂರು ತೇಜರವರ ಕಥೆಯಲ್ಲಿದೆ. ಕನ್ನಡದ ಮನಸ್ಸು ಈಗಲೂ ನಗರೀಕರಣವನ್ನು ಅನುಮಾನದಿಂದಲೇ ನೋಡುತ್ತಿರುವುದರಿಂದ ಎಲ್ಲ ಬರವಣಿಗೆಯಲ್ಲೂ ಹಳ್ಳಿಗಳ ಚಿತ್ರಣವನ್ನು ವೈಭವೀಕರಿಸುವುದುಂಟು. ಕಾವ್ಯಾತ್ಮಕವಾದ ಭಾಷೆ ಇವರ ಕಥಾ ಸಂಕಲನದಲ್ಲಿದೆ ಎಂದರು.

ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಬಿ.ಎಂ. ಗುರುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ದಲಿತ ಸಮುದಾಯದ ಕರುಳ ಸಂವೇದನೆಯನ್ನು ಲೇಖಕ ಮೋದೂರು ತೇಜ ಅವರು ತಮ್ಮ ಬರವಣಿಗೆಯಲ್ಲಿ ಮೂಡಿಸಿದ್ದಾರೆ. ಈ ಕೃತಿಯ ಬಿಡುಗಡೆಯಲ್ಲಿ ಹತ್ತಾರು ಗೆಳೆಯರ ಕಾಳಜಿ ಪ್ರೋತ್ಸಾಹ ಅಡಗಿದೆ. ಹಾಗಾಗಿ ಬರಹಗಾರರು ತಮ್ಮ ಕೃತಿಗಳನ್ನು ಹೊರತರುವಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗಿದೆ ಎಂದು ಲೇಖಕರಿಗಿರುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಹೇಳಿದರು.

ಪತ್ರಕರ್ತ ಮೇಘಗಂಗಾಧರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಸ್.ಎಂ. ಮುತ್ತಯ್ಯ, ಹಿರಿಯ ಪತ್ರಕರ್ತ ಉಜ್ಜನಯ್ಯ, ಎಸ್.ಆರ್. ಗುರುನಾಥ್, ಲೇಖಕ ಮೋದೂರು ತೇಜ, ಎಸ್.ಆರ್. ಗುರುನಾಥ್ ಹಾಜರಿದ್ದರು.

ಕಥೆ ಕಟ್ಟುವ ಕ್ರಮಕ್ಕೆ ಬೇಕಾಗುವ ಪರಿಕರಗಳ ಕೊರತೆಯಿದೆ. ಜಾಗತೀಕರಣದ ಮಾಯಾಜಾಲದಿಂದ ಕನ್ನಡದ ಕಾವ್ಯ ಕಥೆಗಾರರು ಸಿಕ್ಕಿಹಾಕಿಕೊಂಡಿದ್ದಾರೆ. ಅದರಿಂದ ಹೊರಬರುವುದು ಸುಲಭದ ಕೆಲಸವಲ್ಲ.

– ವಿಮರ್ಶಕಿ ತಾರಿಣಿ ಶುಭದಾಯಿನಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.