ADVERTISEMENT

ವಸತಿ ಶಾಲೆ ಅವ್ಯವಸ್ಥೆ: ತಾ.ಪಂ ಅಧ್ಯಕ್ಷ ತರಾಟೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:29 IST
Last Updated 17 ಡಿಸೆಂಬರ್ 2013, 8:29 IST

ಚಳ್ಳಕೆರೆ: ವಿದ್ಯಾರ್ಥಿನಿಯರಿಗೆ ಸರಿಯಾಗಿ ಊಟ ನೀಡದ ಸಿಬ್ಬಂದಿ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಅಧಿಕಾರಿ ಕೆ.ನಾಗರಾಜ್‌ ಅವರನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜಿ.ಟಿ.ತಿಪ್ಪೇಶ್‌ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಹೊರವಲಯದಲ್ಲಿರುವ ಕಿತ್ತೂರು ರಾಣಿ ವಸತಿ ಶಾಲೆಗೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಶಾಲೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ಮೊದಲು ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಿ ಎಂದು ಸೂಚಿಸಿದ ಅವರು, ಗ್ರಾಮೀಣ ಪ್ರದೇಶದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಿಲ್ಲ. 250 ವಿದ್ಯಾರ್ಥಿನಿಯರು ಕಲಿಯುತ್ತಿರುವ ಶಾಲೆಯಲ್ಲಿ ಸಿಬ್ಬಂದಿ ನಡುವೆ ಹೊಂದಾಣಿಕೆಯಿಲ್ಲದ ಕಾರಣ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತವಾಗಿದೆ.

ತರಗತಿಗಳಲ್ಲಿ ಮಕ್ಕಳಿಗೆ ಸರಿಯಾದ ಆಸನ ವ್ಯವಸ್ಥೆಯಿಲ್ಲದೆ ನೆಲದ ಮೇಲೆ ಕೂರುವ ಪರಿಸ್ಥಿತಿ ಇದೆ. ಊಟವನ್ನು ನಿಗದಿತ ಸಮಯಕ್ಕೆ ನೀಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರು ಮನೆಗೆ ವಾಪಸ್‌ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವ್ಯವಸ್ಥೆಗೆ ಕಾರಣವಾಗಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಎಂದು ಕಿಡಿಕಾರಿದರು.

ಯಾರ ಅನುವತಿಯೂ ಇಲ್ಲದೆ ಗೈರು ಹಾಜರಾಗಿರುವ ಪ್ರಾಂಶುಪಾಲರಿಗೆ ನೋಟಿಸ್‌ ಜಾರಿ ಮಾಡಿ, ಅಮಾನತುಗೊಳಿಸಲು ಮೇಲಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.